ಮೆಚ್ಚುಗೆಗೆ ಪಾತ್ರವಾದ ಅಣಕು ಯುವ ಸಂಸತ್ ಕಲಾಪ


ಚಿತ್ರದುರ್ಗ.ನ.21; ರಾಜ್ಯದ ಆರೋಗ್ಯ, ಶಿಕ್ಷಣ ಹಾಗೂ ಕಾನೂನು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತ ಚರ್ಚೆಗೆ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ ಯುವ ಸಂಸತ್ ಕಲಾಪ (ಅಣಕು ಪ್ರದರ್ಶನ) ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಕ್ಕೆ ವೇದಿಕೆ ಕಲ್ಪಿಸಿದಂತೆ ಕಂಡುಬಂದಿತು.ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಸಚಿವಾಲಯ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಶ್ರಾಯದಲ್ಲಿ 2023-24ನೇ ಸಾಲಿನ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲೆಯಿಂದ ಆಯ್ಕೆಯಾದ 20 ಮಕ್ಕಳು ಭಾಗವಹಿಸಿದ್ದರು.ಜಿ.ಪಂ ಸಭಾಂಗಣದಲ್ಲಿ ಜರುಗಿದ ಅಣಕು ಯುವ ಸಂಸತ್ ಕಲಾಪ ನಿಜಕ್ಕೂ ಕುತೂಹಲಕಾರಿಯಾಗಿತ್ತು.  ವಿಧಾನಸೌಧದಲ್ಲಿ ಜರುಗುವ ಕಲಾಪದ ರೀತಿಯಲ್ಲಿಯೇ, ಯುವ ಸಂಸತ್ ಕಲಾಪ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುವ ರೀತಿಯ ಪರಿಕಲ್ಪನೆ ನಿಜಕ್ಕೂ ಪ್ರಶಂಸನೀಯವಾಯಿತು.ಹೊಸದುರ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಯಶವಂತ್ ಪಾಟೀಲ್ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತು ಯುವ ಸಂಸತ್ ಕಾರ್ಯ ಕಲಾಪಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಡಾ.ಪುನೀತ್ ರಾಜ್‍ಕುಮಾರ್, ಡಾ.ಭುಜಂಗ ಶೆಟ್ಟಿ, ಡಿ.ಬಿ.ಚಂದ್ರೇಗೌಡರ ಅಕಾಲಿಕ ಮರಣದ ಕುರಿತು ಸಭಾಧ್ಯಕ್ಷರು ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ಅಗಲಿದ ಗಣ್ಯರ ಗೌರವಾರ್ಥವಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು.ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿ:  ಹಿರಿಯೂರು ತಾಲ್ಲೂಕಿನ ಕೆ.ಪಿ.ಎಸ್. ಶಾಲೆ ವಿದ್ಯಾರ್ಥಿನಿ ವಿರೋಧ ಪಕ್ಷದ ನಾಯಕಿ ನಂದಿತಾ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ. ಇದಕ್ಕೆ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಹೊಳಲ್ಕೆರೆ ತಾಲ್ಲೂಕಿನ ಎಂ.ಎಂ ಸರ್ಕಾರಿ ಫ್ರೌಢಶಾಲೆ ವಿದ್ಯಾರ್ಥಿನಿ ಶಿಕ್ಷಣ ಸಚಿವೆ ಜಿ.ಆರ್.ಶಾಲಿನಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದ ಹಲವು ಕೊರತೆಗಳನ್ನು ನೀಗಿಸುತ್ತಿದ್ದೇವೆ. ಎಲ್ಲಾ ಮಕ್ಕಳಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುತ್ತಿದ್ದೇವೆ ಎಂದರು. ಶಿಕ್ಷಣ ಮಂತ್ರಿಗಳ ಉತ್ತರದಿಂದ ಸಮಾಧಾನಗೊಳ್ಳದ ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು, ಉಡಾಫೆ ಉತ್ತರ ನೀಡಬಾರದು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಿದರು.