ಮೆಕ್ಕೇಜೋಳಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ : ಬಸವರಾಜು ವಿ ಶಿವಗಂಗಾ

ದಾವಣಗೆರೆ.ಜ.೮; ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕೆಂದು  ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಮೆಕ್ಕೇಜೋಳ ಬೆಳೆದ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ರೈತರ ಬಗ್ಗೆ ಕಾಳಜಿ ಇಲ್ಲ. ಕ್ವಿಂಟಲ್ ಮೆಕ್ಕೇಜೋಳಕ್ಕೆ 1300 ರಿಂದ 1,350 ರೂಪಾಯಿ ಬೆಲೆ ಇದೆ ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲದಂತಾಗಿದೆ ಎಂದರು. ಕ್ವಿಂಟಲ್ ಮೆಕ್ಕೇಜೋಳಕ್ಕೆ ಕನಿಷ್ಠ 2,200 ರಿಂದ 2,300 ರೂಪಾಯಿ ಬೆಲೆ ಸಿಕ್ಕರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮೆಕ್ಕೇಜೋಳಕ್ಕೆ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕೆಂದರು. ಅಲ್ಲದೇ ಖಾಸಗಿ ವ್ಯಾಪಾರಸ್ಥರು ಹಾಗೂ ಖರೀದಿ ಕೇಂದ್ರದಲ್ಲಿ ಕಡಿಮೆ ಬೆಲೆಗೆ ಮೆಕ್ಕೇಜೋಳ ಖರೀದಿ ಮಾಡದಂತೆ ಸೂಚನೆ ನೀಡಬೇಕು. ರೈತರಿಗೆ ಆಗುತ್ತಿರುವ ಅನ್ಯ‍ಾಯವನ್ನ ತಡೆಯಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಸರಿ ಸುಮಾರು 1.5 ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೇಜೋಳ ಬೆಳೆದಿದ್ದು ಇದೀಗ ಬೆಲೆ ಇಲ್ಲದ ಕಾರಣ ರೈತರು ಮಾರಾಟಕ್ಕೆ ಮುಂದಾಗುತ್ತಿಲ್ಲ. ಬೆಲೆ ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಮೆಕ್ಕೇಜೋಳ ಮಾರಾಟ ಮಾಡ ದೇ ಕೂತಿದ್ದಾರೆ. ಜನವರಿ ತಿಂಗಳು ಬಂದರೂ ಸಹ ಮೆಕ್ಕೇಜೋಳಕ್ಕೆ ಸೂಕ್ತ ಬೆಲೆ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ ಮುಂಗಾರಿನಲ್ಲಿ ಬೆಳೆದ ಮೆಕ್ಕೇಜೋಳವನ್ನ ಬೆಲೆ ಇಲ್ಲದ ಕಾರಣ ರೈತರು ಮಾರಾಟ ಮಾಡದೇ ಇದ್ದಾರೆ. ಸರ್ಕಾರ ಕೂಡಲೇ ಕ್ವಿಂಟಲ್  ಮೆಕ್ಕೇಜೋಳಕ್ಕೆ ಕನಿಷ್ಠ 2,200 ರಿಂದ 2,300 ರೂಪಾಯಿ ನಿಗಧಿ ಮಾಡಬೇಕೆಂದು ಆಗ್ರಹಿಸಿದ್ದಾರೆ.  1 ಎಕೆರೆ ಮೆಕ್ಕೇಜೋಳ ಬೆಳೆಯಲು 20 ರಿಂದ 25 ಸಾವಿರ ರೂಪಾಯಿ ಖರ್ಚಾಗುತ್ತದೆ ಅಲ್ಲದೇ ಎಕೆರೆಗೆ 25 ರಿಂದ 30 ಕ್ವಿಂಟಲ್ ಮೆಕ್ಕೇಜೋಳ ಆದರೆ  ರೈತರು ಬದುಕುವುದಾದರು ಹೇಗೆ. ಈ ನಡುವೆ ಸಾಲ ಸೂಲ ಮಾಡಿದ ರೈತರ ಸಾಲ ತೀರಿಸುವುದಾದರು ಹೇಗೆ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಪ್ರಶ್ನಿಸಿದ್ದಾರೆ. ಸರ್ಕಾರ ಕೂಡಲೇ ಮೆಕ್ಕೇಜೋಳಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಕಿಸಾನ್ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.