ಮೆಕ್ಕೆಜೋಳ ಬೆಳೆ ಕ್ಷೇತ್ರೋತ್ಸವ

ಹೂವಿನಹಡಗಲಿ ಮ 15 : ತಾಲೂಕಿನ ಉತ್ತಂಗಿ ಗ್ರಾಮದ ಪ್ರಗತಿಪರ ರೈತ ಮುದೇಗೌಡ್ರ ಬಸವರಾಜಪ್ಪನವರ ಹೊಲದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಮೆಕ್ಕೆಜೋಳ ಬೆಳೆ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೈತ ಎಸ್.ಎಂ.ಕೃಪಾಮೂರ್ತಿ ಮಾತನಾಡಿ, ಈ ಬಾರಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಬೆಳೆಗಳು ಉತ್ಕøಷ್ಟವಾಗಿವೆ. ಕೃಷಿ ಅಧಿಕಾರಿಗಳು ಹೊಸ ಸಂಶೋಧನೆ ಹಾಗೂ ತಂತ್ರಜ್ಞಾನಗಳನ್ನು ಗ್ರಾಮಾಂತರ ಭಾಗದ ರೈತರಿಗೆ ಪರಿಚಯಿಸಬೇಕು ಎಂದು ಹೇಳಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಡಾ. ಸಿ.ಎಂ. ಕಾಲಿಬಾವಿ ಮಾತನಾಡಿ, ರಾಯಚೂರು ಕೃಷಿ ವಿ.ವಿ. ನೂತನವಾಗಿ ಬಿಡುಗಡೆಗೊಳಿಸಿದ ಮೆಕ್ಕೆಜೋಳ ಆರ್.ಸಿ.ಆರ್. ಎಂ.ಎಚ್.-2 ತಳಿಯು ಬರ ಸಹಿಷ್ಣುತೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ತಳಿಯು ಹೆಚ್ಚು ಇಳುವರಿ ಕೊಡುವುದರಿಂದ ರೈತರಿಗೆ ಲಾಭದಾಯಕವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೈತ ಬಿ. ಚಂದ್ರಪ್ಪ ಮಾತನಾಡಿ, ಈ ಭಾರಿ ಮೆಕ್ಕೆಜೋಳ ಉತ್ಕೃಷ್ಟ ಇಳುವರಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ರೈತರಾದ ಜಿ. ಸೋಮೆಶೇಖರ, ಕೆ.ಎ.ನಾಗರಾಜ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ಹನುಮಂತಪ್ಪ ಶ್ರೀಹರಿ, ಡಾ. ಮಂಜುನಾಥ ಭಾನುವಳ್ಳಿ, ಎನ್.ಎಚ್.ಸುನೀತಾ ಮಾತನಾಡಿದರು.