ಮೆಕ್ಕೆಜೋಳ ಬೆಳೆಗೆ ಶೀತ ಬಾಧೆ 

ನ್ಯಾಮತಿ.ಜು.೨೧;  ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇತ್ತೀಚೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆಗಾರರಿಗೆ ಹೊರೆಯಾಗಿ ಪರಿಣಮಿಸಿದೆ. ಎಡೆಬಿಡದೆ ಬಿದ್ದ ಭಾರೀ ವರ್ಷಧಾರೆಯಿಂದ, ಮೆಕ್ಕೆಜೋಳ ಬೆಳೆಗೆ ಶೀತ ಬಾಧೆ ಆವರಿಸಿಕೊಂಡಿದೆ!ಇದರಿಂದ ಬೆಳೆದ ಬೆಳೆಯು ಹಾಳಾಗಲಾರಂಭಿಸಿದೆ. ಎಲೆಗಳು ಒಣಗಿದ ರೀತಿಯಲ್ಲಿ ಮಾರ್ಪಡುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಹಲವೆಡೆ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆಯೊಡೆಯದೆ ಕೊಳೆತು ಹೋಗಿವೆ.ಇದರಿಂದಾಗಿ ಜಮೀನುಗಳಲ್ಲಿ ಮೇಕ್ಕೆಜೋಳ ಬಿತ್ತನೆ ಮಾಡಿ, ಗೊಬ್ಬರ, ಔಷಧಕ್ಕೆ ಸಾವಿರಾರು ರೂಪಾಯಿ ವೆಚ್ಚ ಭರಿಸಿದ್ದ ರೈತರಿಗೆ ಚಿಂತೆಯಾಗಿದೆ. ಪ್ರತಿನಿತ್ಯ ತಾಲೂಕಿನ ಗ್ರಾಮಗಳ ಹತ್ತಾರು ರೈತರು ದೂರದಿಂದ ಮಳೆಯಿಂದ (ಜಮೀನುಗಳಲ್ಲಿ ನೀರು ಸಂಗ್ರಹ ) ಹೊಲದಲ್ಲಿ ಜಲಾವೃತವಾದ ನೋಡಿ ಬೇಸರದೊಂದಿಗೆ ಮನೆಗೆ ಮರಳುತ್ತಿದ್ದಾರೆಭಾರೀ ಮಳೆಯಿಂದ ಮೆಕ್ಕೆಜೋಳ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಮತ್ತೊಮ್ಮೆ ಬೆಳೆ ಬಿತ್ತನೆ ಮಾಡುವಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಅನುಕೂಲವಾಗಲಿದೆ ಎಂದು ರೈತರು ಮನವಿ ಮಾಡಿದ್ದಾರೆ.