ಮೆಕ್ಕೆಜೋಳ ತೆಗೆದುಕೊಂಡಿದ್ದಕ್ಕೆ ಕೂಲಿ ಕಾರ್ಮಿಕನ ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಹೊಲದ ಮಾಲಿಕ

ಜೇವಗಿ,ಏ.5-ತಿನ್ನುವುದಕ್ಕೆಂದು ಮೆಕ್ಕೆಜೋಳ ತೆಗೆದುಕೊಂಡಿದಕ್ಕೆ ಕೂಲಿ ಕಾರ್ಮಿಕನನ್ನು ಹೊಲದ ಮಾಲಿಕ ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಜೇವರ್ಗಿ ತಾಲ್ಲೂಕಿನ ನೇದಲಗಿ ಗ್ರಾಮದಲ್ಲಿ ನಡೆದಿದೆ.
ಸುರೇಶ ತಂದೆ ಯಲ್ಲಪ್ಪ ವಡ್ಡರ್ ಎಂಬ ಕೂಲಿ ಕಾರ್ಮಿಕನ ಮೇಲೆ ರಾವುತ್ ಮಾಲಿಗೌಡ ಎಂಬುವರೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸುರೇಶ ವಡ್ಡರ್ ಗ್ರಾಮದ ರಾವುತ್ ಮಾಲಿಗೌಡ ಎಂಬುವವರ ಬಳಿ ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಸೋಮವಾರ ಸಹ ಕೂಲಿ ಕೆಲಸಕ್ಕೆ ಹೋಗಿದ್ದ. ಹೋಲಕ್ಕೆ ಹೋಗಿ ಹಸುಗಳಿಗೆ ಮೇವು ಹಾಕಿ ಬಾ ಎಂದು ರಾವುತ್ ಮಾಲಿಗೌಡ ಸೂಚಿಸಿದ್ದ. ಅದರಂತೆ ಸುರೇಶ ವಡ್ಡರ್ ಹೊಲಕ್ಕೆ ಹೋಗಿ ಹಸುಗಳಿಗೆ ಮೇವು ಹಾಕಿ ತಿನ್ನುವುದಕ್ಕೆಂದು ಒಂದಿಷ್ಟು ಮೆಕ್ಕೆಜೋಳದ ತೆನೆಯನ್ನು ತೆಗೆದುಕೊಂಡಿದ್ದ. ಇದರಿಂದ ಕುಪಿತನಾದ ರಾವುತ್ ಮಾಲಿಗೌಡ ಸುರೇಶ ವಡ್ಡರ್‍ನನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸುರೇಶ ಸಹೋದರಿ ಹೊಲಕ್ಕೆ ಹೋಗಿ ಸಹೋದರನನ್ನು ಬಿಡಿಸಿಕೊಂಡು ಬಂದಿದ್ದಾಳೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಕ್ರಮ ಜರುಗಿಸುವಂತೆ ಸುರೇಶ ಸಹೋದರಿ ಆಗ್ರಹಿಸಿದ್ದಾರೆ.