ಮೆಂಟಲ್ ಗಿರಾಕಿಗಳಿಗೆ ಪ್ರತಿಕ್ರಿಯಿಸಲ್ಲ

ಬೆಂಗಳೂರು, ಮಾ. ೧೩- ಮೆಂಟಲ್ ಗಿರಾಕಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಡಿ.ಕೆ. ಶಿವಕುಮಾರ್ ಬಿಜೆಪಿ ಸಚಿವರಿಗೊಬ್ಬರಿಗೆ ಸಿ.ಡಿ. ಬೆದರಿಕೆ ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿಗೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಆಧಾರ ರಹಿತ ಆರೋಪ ಮಾಡುತ್ತಾ ಬಾಯಿಗೆ ಬಂದಂತೆ ಮಾತನಾಡುವ ಮೆಂಟಲ್ ಗಿರಾಕಿ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ಏನೇನು ಆಗುತ್ತದೆಯೋ ಅದನ್ನು ನೋಡಿಕೊಳ್ಳಲಿ. ನಿಮ್ಹಾನ್ಸ್ ಸೇರಬೇಕಾದವರ ಮಾತುಗಳಿಗೆಲ್ಲ ನಾನು ಪ್ರತಿಕ್ರಿಯಿಸಲ್ಲ. ರಮೇಶ್ ಜಾರಕಿಹೊಳಿ ಅವರನ್ನು ಆಸ್ಪತ್ರೆಗೆ ಸೇರಿವುದು ಉತ್ತಮ ಎಂದು ವ್ಯಂಗ್ಯವಾಡಿದರು.
ಎರಡು ದಿನಗಳ ಹಿಂದೆಯಷ್ಟೇ ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಪುತ್ರರಿಗೆ ಟಿಕೆಟ್ ನೀಡುವಂತೆ ಬಂದಿರುವ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಧ್ರುವನಾರಾಯಣ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಟಿಕೆಟ್ ಹಂಚಿಕೆ ಬಗ್ಗೆ ಖರ್ಗೆಯವರೇ ತೀರ್ಮಾನ ಮಾಡಲಿದ್ದಾರೆ ಎಂದರು.
ಪಕ್ಷದ ನಿಷ್ಠಾವಂತ ನಾಯಕರಾದ ಧ್ರುವನಾರಾಯಣ ಅವರ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿ ನಮ್ಮ ನಾಯಕರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಧ್ರುವನಾರಾಯಣ ಅವರಂತಹ ನಾಯಕರ ನಿಧನದಿಂದ ಆಗಿರುವ ಆಘಾತದಿಂದ ನಾನು ಇನ್ನು ಹೊರ ಬರಲು ಸಾಧ್ಯವಾಗಿಲ್ಲ. ಸಂಘಟನಾ ಶಕ್ತಿ, ತಾಳ್ಮೆ, ನಿಷ್ಠೆ, ಸೌಮ್ಯ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರು ಧ್ರುವನಾರಾಯಣ ಅವರು. ಅವರ ಆತ್ಮಕ್ಕೆ ಶಾಂತಿ ಸಿಗುವಂತಹ ಕೆಲಸವನ್ನು ಪಕ್ಷ ಮಾಡಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳುವ ಮೂಲಕ ಧ್ರುವನಾರಾಯಣರವರ ಪುತ್ರನಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ಸುಳಿವು ನೀಡಿದರು.
೧೭ ರಂದು ಅಂತಿಮ ಪಟ್ಟಿ
ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಮಾ. ೧೬ ರಂದು ಸಭೆ ನಡೆಯಲಿದೆ. ಹಾಗೆಯೇ ಮಾ. ೧೭ ರಂದು ಪಕ್ಷದ ಚುನಾವಣಾ ಸಮಿತಿ ಸಭೆಯು ನಡೆಯಲಿದೆ. ಅಲ್ಲಿ ಎಲ್ಲವೂ ಅಂತಿಮವಾಗಲಿದೆ ಎಂದು ಅವರು ಹೇಳಿದರು.
ನಿನ್ನೆ ಮಂಡ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ರೌಡಿಶೀಟರ್ ಫೈಟರ್ ರವಿಗೆ ಕೈ ಮುಗಿದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಪಕ್ಷ, ಅವರಿಗೆ ಯಾರು ಬೇಕೋ ಅವರನ್ನು ಸೇರಿಸಿಕೊಂಡಿದ್ದಾರೆ. ಸ್ಯಾಂಟ್ರೋ ರವಿಯನ್ನಾದರೂ ಸೇರಿಸಿಕೊಳ್ಳಲಿ, ಫೈಟರ್ ರವಿಯನ್ನಾದರೂ ಸೇರಿಸಿಕೊಳ್ಳಲಿ. ಅತ್ಯಾಚಾರಿಗಳನ್ನು ಜತೆಯಲ್ಲಿ ಇಟ್ಟುಕೊಳ್ಳಲಿ, ಲಂಚಕೋರರನ್ನಾದರೂ ಇಟ್ಟುಕೊಳ್ಳಲಿ, ಆ ವಿಚಾರ ನಮಗೇಕೆ. ಆ ಪಕ್ಷದ ಬಗ್ಗೆ ನಾನು ಮಾತನಾಡಲ್ಲ ಎಂದರು.
ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಇಂದು ತಮ್ಮನ್ನು ಭೇಟಿ ಮಾಡಿ ಬಿಜೆಪಿಯಿಂದ ಬಂದಿರುವ ಪುಟ್ಟಣ್ಣನವರಿಗೆ ಟಿಕೆಟ್ ನೀಡುವುದು ಬೇಡ ಎಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಯಾರಿಗೆ ಟಿಕೆಟ್ ನೀಡುತ್ತಿದ್ದೇವೆ ಎಂದು ಯಾರು ಹೇಳಿದರು. ಪಕ್ಷ ಎಲ್ಲವನ್ನು ನೋಡಿಕೊಂಡು ತೀರ್ಮಾನ ಮಾಡುತ್ತದೆ. ಯಾರ ಬೆದರಿಕೆಗೂ ಬಗ್ಗಲ್ಲ ಎಂದರು.