ಮೃತ ಯುಎಸ್ ನೌಕಾಪಡೆ ಅಧಿಕಾರಿಗಳ ಗುರುತು ಪತ್ತೆ

ಮೆಲ್ಬೊರ್ನ್ (ಆಸ್ಟ್ರೇಲಿಯಾ), ಆ.೨೯- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ಮಿಲಿಟರಿ ಅಭ್ಯಾಸದ ವೇಳೆ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಮೂವರು ಅಮೆರಿಕಾ ನೌಕಾಪಡೆಯ ಮೂವರ ಗುರುತುಗಳನ್ನು ಪತ್ತೆಹಚ್ಚಲಾಗಿದೆ. ಸದ್ಯ ದುರಂತದ ಬಗ್ಗೆ ತನಿಖೆ ಮುಂದುವರೆದಿದೆ.
ದುರ್ಘಟನೆಯಲ್ಲಿ ಮೃತಪಟ್ಟ ಮರೀನ್ ಅಧಿಕಾರಿಗಳನ್ನು ಕ್ಯಾಪ್ಟನ್ ಎಲೀನರ್ ಲೆಬ್ಯೂ (೨೯), ಕಾರ್ಪೋರಲ್ ಸ್ಪೆನ್ಸರ್ ಕಾಲರ್ಟ್ (೨೧) ಮತ್ತು ಮೇಜರ್ ಟೋಬಿನ್ ಲೆವಿಸ್ (೩೭) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ೨೦ ಮಂದಿ ಗಾಯಗೊಂಡಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಮೆರೈನ್ ರೊಟೇಶನಲ್ ಫೋರ್ಸ್ನ ಕಮಾಂಡಿಂಗ್ ಆಫೀಸರ್ ಡಾರ್ವಿನ್, ಗೌರವಾನ್ವಿತ ಮತ್ತು ಪ್ರೀತಿಯ ನೌಕಾಪಡೆ ಅಧಿಕಾರಿಗಳ ನಿಧನದಿಂದ ನೌಕಾ ಪಡೆಯು ಆಳವಾಗಿ ದುಃಖಿತವಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬಗಳೊಂದಿಗೆ ಮತ್ತು ಇದರಲ್ಲಿ ಭಾಗಿಯಾಗಿರುವ ಎಲ್ಲರೊಂದಿಗೆ ಇದೆ ಎಂದು ಕರ್ನಲ್ ಬ್ರೆಂಡನ್ ಸುಲ್ಲಿವನ್ ಹೇಳಿದರು. ಭಾನುವಾರ ಆಸ್ಟ್ರೇಲಿಯಾ, ಅಮೆರಿಕಾ, ಫಿಲಿಪೈನ್ಸ್, ಪೂರ್ವ ತಿಮೋರ್ ಹಾಗೂ ಇಂಡೋನೇಶ್ಯಾ ಸೇರಿದ ಸುಮಾರು ೨೫೦೦ ಅಧಿಕಾರಿಗಳ ಅಭ್ಯಾಸದ ವೇಳೆ ಹೆಲಿಕಾಪ್ಟರ್ ಮೆಲ್ವಿಲ್ಲೆ ದ್ವೀಪದಲ್ಲಿ ಪತನಗೊಂಡಿತ್ತು.