ಮೃತ ಬಾಲಕ ಜೀವಂತ

ಧಾರವಾಡ, ಅ.೧೮- ಜಿಲ್ಲೆಯ ಬಸಾಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮೃತಪಟ್ಟಿದ್ದಾನೆ ಎಂದು ತಿಳಿದಿದ್ದ ಬಾಲಕ ಅಂತ್ಯಸಂಸ್ಕಾರ ನೆರವೇರಿಸುವ ಸಮಯದಲ್ಲಿ ಜೀವಂತವಾಗಿರುವುದು ತಿಳಿದುಬಂದ ಘಟನೆ ಜರುಗಿದೆ.
ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಕೊಡಿಸಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕಾಶ ಮೃತಪಟ್ಟಿದ್ದಾನೆ ಎಂದು ಕಿಮ್ಸ್ ವೈದ್ಯರು ತಿಳಿಸಿದ್ದಾರೆ.
ಮೃತ ಆಕಾಶನನ್ನು ಆತನ ಪೋಷಕರು ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲು ಬಸಾಪುರ ಗ್ರಾಮಕ್ಕೆ ಕರೆತಂದಿದ್ದಾರೆ .ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇನ್ನೇನು, ಸತ್ತ ಬಾಲಕನ ಬಾಯಿಗೆ ಎರಡು ಹನಿ ನೀರು ಹಾಕುತ್ತಿದ್ದಂತೆ, ಬಾಲಕ ಉಸಿರಾಡಿದನು. ಬಾಲಕ ಉಸಿರಾಡುವುದನ್ನು ಗಮನಿಸಿದ ಗ್ರಾಮಸ್ಥರು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಆಕಾಶ್‌ನನ್ನು ಕೂಡಲೇ ನವಲಗುಂದ ಆಸ್ಪತ್ರೆಗೆ ಕರೆದೊಯ್ದರು.
ಆದರೆ ಅಲ್ಲಿ ವೆಂಟಿಲೇಟರ್ ಕೊರತೆಯಿಂದ ಆಕಾಶನನ್ನು ಪುನಃ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ವೈದ್ಯಕೀಯ ಲೋಕದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.