ಮೃತ ಪೇದೆ ಮಯೂರ್ ಕುಟುಂಬಕ್ಕೆ 30 ಲಕ್ಷ ಪರಿಹಾರ

ಕಲಬುರಗಿ,ಜೂ.17-ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆಯ ಟ್ರ್ಯಾಕ್ಟರ್ ಹರಿದು ಕರ್ತವ್ಯದ ಮೇಲಿದ್ದ ಮುಖ್ಯಪೇದೆ ಮಯೂರ್ ಚವ್ಹಾಣ್ ಸಾವನ್ನಪ್ಪಿರುವ ಘಟನೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿರುವ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರು ಇದೊಂದು ಹೇಯ ಕೃತ್ಯವಾಗಿದೆ. ತಪ್ಪಿತಸ್ಥರು ಯಾರೇ ಇರಲಿ, ಅವರನ್ನು ಬಂಧಿಸಿ ಕಟಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಘಟನೆಯ ಸುದ್ದಿ ತಿಳಿದ ತಕ್ಷಣ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ ಅವರೊಂದಿಗೆ ಮಾತುಕತೆ ನಡೆಸಿರುವೆ. ತಕ್ಷಣಕ್ಕೆ ಗೃಹ ಸಚಿವರು ಮೃತ ಪೇದೆಯ ಕುಟುಂಕ್ಕೆ 30 ಲಕ್ಷ ರು ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಮೃತ ಕುಟುಂಬದ ಸದ್ಯರೊಬ್ಬರಿಗೆ ಸರ್ಕಾರಿ ನೌಕರಿಗೂ ತಾವು ಮನವಿ ಮಾಡಿದ್ದಾಗಿ ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಜೇವರ್ಗಿ ಮತಕ್ಷೇತ್ರದಲ್ಲಿ ಎಲ್ಲಿಯೂ ಅಕ್ರಮ ಮರಳುಗಾರಿಕೆಗೆ ಯಾವತ್ತೂ ಅವಕಾಶ ಕೊಡಬಾರದು ಎಂದು ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ತವು ಯಾವತ್ತೂ ಖಡಕ್ ಸೂಚನೆ ನೀಡುತ್ತಲೇ ಬಂದಿದ್ದೇನೆ. ಇಲಾಖಾ ಅಧಿಕಾರಿಗಳ ಕಣ್ಣು ತಪ್ಪಿಸಿ ಇಂತಹ ಘಟನೆಗೆ ಕೆಲವರು ಕಾರಣರಾಗುತ್ತಿದ್ದಾರೆಂಬ ಸಂಗತಿ ಗಮನಕ್ಕೆ ಬಂದಿದೆ. ಈ ಘಟನೆಯ ನಂತರ ಮತ್ತೆ ಜಿಲ್ಲಾ ಎಸ್ಪಿ ಇಶಾ ಪಂತ್ ಹಾಗೂ ಜಿಲ್ಲಾಧಿಕಾರಿ ಯಶ್ವಂತ ಗುರುಕರ್ ಅವರಿಗೆ ತಾವು ಖುದ್ದು ದೂರವಾಣಿ ಕರೆ ಮಾಡಿ ಮಾತನಾಡಿರೋದಾಗಿ ಹೇಳಿರುವ ಡಾ. ಅಜಯ್ ಸಿಂಗ್ ಜೇವರ್ಗಿ ಮತಕ್ಷೇತ್ರದಲ್ಲಿ ಒಂದು ಹಿಡಿ ಮರಳು, ಮಣ್ಣು ಕೂಡಾ ಅಕ್ರಮವಾಗಿ ಸಾಗಾಟವಾಗಬಾರದು ಎಂಬ ಖಡಕ್ ಎಚ್ಚರಿಕೆ ನೀಡಿದ್ದಾಗಿ ಹೇಳಿದ್ದಾರೆ.