ಮೃತ ಜಾನುವಾರು ಪರಿಹಾರಧನ ಮುಂದುವರೆಸಲು ಆಗ್ರಹ

ಕೋಲಾರ,ಜೂ,೮- ಆಕಸ್ಮಿಕವಾಗಿ ಮೃತಪಡುವ ಕುರಿ ಹಾಗೂ ಮೇಕೆಗಳಿಗೆ ನೀಡುತ್ತಿದ್ದ ೫ ಸಾವಿರ ರೂ.ಗಳ ಪರಿಹಾರ ಧನದ ಯೋಜನೆಯನ್ನು ಸರ್ಕಾರ ಮುಂದುವರಿಸಬೇಕು ಎಂದು ನಮ್ಮ ಕೋಲಾರ ರೈತ ಸಂಘದಿಂದ ನಗರದ ಪಶು ಇಲಾಖೆ ಕಚೇರಿಯಲ್ಲಿ ಪಶು ಇಲಾಖೆ ಅಧೀಕ್ಷಕ ಶಬೀರ್‌ಪಾಷರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಳ್ಳಿ ಗಣೇಶ್‌ಗೌಡ ಮಾತನಾಡಿ, ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಕುರಿ ಮತ್ತು ಮೇಕೆ ಹಾಗೂ ಹಸುಗಳನ್ನು ಸಾಕುವ ಮೂಲಕ ಬದುಕನ್ನು ಸಾಗಿಸುತ್ತಿದ್ದಾರೆ. ಈ ಹಿಂದೆ ಕುರಿ ಮೇಕೆ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದುತ್ತಿದ್ದರೆ ಅದಕ್ಕೆಪರಿಹಾರವನ್ನು ನೀಡುವ ಕಾರ್ಯ ಸರ್ಕಾರ ಮಾಡುತ್ತಿತ್ತು. ಆದರೆ ಕಳೆದ ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಪರಿಹಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇದಕ್ಕೆ ಸಾಕಷ್ಟು ರೈತರು ತೊಂದರೆ ಅನುಭವಿಸುವಂತಾಗಿದೆ.
ಕುರಿ ಮೇಕೆ ಮೇಯಿಸುವ ಸಾಕಷ್ಟು ರೈತರಿಗೆ ಆಕಸ್ಮಿಕವಾಗಿ ಮೃತಪಡುವ ಜಾನುವಾರಗಳಿಂದ ಪರಿಹಾರವಿಲ್ಲದೆ ತೊಂದರೆಯಾಗಿದೆ. ಹೀಗಾಗಿ ಕುರಿ ಮೇಕೆ ಸಾಕುವ ರೈತರಿಗೆ ರಾಜ್ಯ ಸರ್ಕಾರ ೫ ಸಾವಿರ ರೂ.ಗಳ ಪರಿಹಾರವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ವೆಂಕಟರವಣಪ್ಪ, ಕೆಂಬೋಡಿ ಬಿ.ಪಿ. ಕೃಷ್ಣ ಇತರರು ಇದ್ದರು