ಮೃತ ಆಟೋ ಚಾಲಕನ ಕುಟುಂಬಕ್ಕೆ ರಫೀಕ್ ಸಾಂತ್ವನ

ತುಮಕೂರು, ಜು. ೨೦- ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಆಟೋ ಚಾಲಕ ಅಮ್ಜಾದ್ ಖಾನ್ ಅವರ ಶಾಂತಿ ನಗರದ ನಿವಾಸಕ್ಕೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮೃತರ ಪತ್ನಿ, ಇಬ್ಬರು ಮಕ್ಕಳನ್ನು ಭೇಟಿ ಮಾಡಿ ಧೈರ್ಯ ತುಂಬಿದ ಮಾಜಿ ಶಾಸಕ ರಫೀಕ್‌ಅಹಮದ್ ಅವರು ವೈಯುಕ್ತಿಕವಾಗಿ ಧನ ಸಹಾಯ ನೀಡಿದರು. ಅಲ್ಲದೆ ಆ ಕುಟುಂಬಕ್ಕೆ ಅಗತ್ಯವಿರುವ ದಿನಸಿ ಪದಾರ್ಥಗಳನ್ನು ವಿತರಿಸಿದರು.
ಮೃತರ ಮಗಳು ಕುಮಾರಿ ಸಾನಿಯಾ ಕಾತ್ಯಂದ್ರದ ಶಾಲೆಯಲ್ಲಿ ೧೦ನೇ ತರಗತಿ ಓದಿ ಶೇ. ೯೪ ರಷ್ಟು ಅಂಕ ಪಡೆದಿದ್ದು, ಸದರಿ ಹೆಣ್ಣು ಮಗಳ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಫೀಕ್ ಅಹಮದ್, ಘಟನೆ ನಡೆದಿರುವುದು ದುರಂತ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಹಾಗಾಗಿ ಮಾನವೀಯ ಹಿನ್ನೆಲೆಯಲ್ಲಿ ನಮ್ಮ ಕೈಲಾದ ಸಹಾಯ ಮಾಡಿದ್ದೇನೆ. ಮೃತರ ಮಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಐಪಿಎಸ್ ಮಾಡುವ ಗುರಿ ಹೊಂದಿದ್ದಾರೆ. ಆಕೆಯ ಓದಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಸಿದ್ದನಿದ್ದೇನೆ ಎಂದರು.
ಒಂದು ವೇಳೆ ಆಕೆ ಇಂಜಿನಿಯರಿಂಗ್ ಮಾಡುವ ಇಚ್ಚೆ ವ್ಯಕ್ತಪಡಿಸಿದರೆ ನಮ್ಮ ಹೆಚ್.ಎಂ.ಎಸ್.ಐ.ಟಿ ಯಲ್ಲಿಯೇ ಡಿಪ್ಲೋಮಾದಿಂದ ಇಂಜಿನಿಯರಿಂಗ್ ವರೆಗಿನ ಆರು ವರ್ಷದ ಶಿಕ್ಷಣವನ್ನು ಉಚಿತವಾಗಿ ನೀಡಲು ನಾವು ಸಿದ್ದರಿದ್ದೇವೆ. ಇಲ್ಲವೆ ಪಿಯುಸಿ ಓದುತ್ತೇನೆ ಎಂದರೆ ಅದಕ್ಕೆ ಬೇಕಾದ ಶುಲ್ಕ ಭರಿಸಲು ನಾವು ಸಿದ್ದವಿದ್ದು, ಕುಟುಂಬದ ಮುಖ್ಯಸ್ಥರಾದ ಮೃತರ ಪತ್ನಿ ಹಾಜಿರಾ ಹಾಗೂ ಅವರ ಸಹೋದರರಿಗೆ ಸಲಹೆ ನೀಡಿದ್ದು, ಅವರ ನಿರ್ಧಾರದಂತೆ ಮಗಳ ಓದಿಗೆ ನೆರವು ನೀಡುವುದಾಗಿ ತಿಳಿಸಿದರು.
ಈಗಾಗಲೇ ನಗರಪಾಲಿಕೆಯ ಆಯುಕ್ತರು ಮೃತರ ಮಗನಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಜಿಲ್ಲಾಡಳಿತ ೫ ಲಕ್ಷ ರೂ.ಗಳ ಪರಿಹಾರ ನೀಡಿದ್ದು, ಕಾರ್ಮಿಕ ಇಲಾಖೆಯಿಂದ ೫ ಲಕ್ಷ ಮತ್ತು ನಗರಪಾಲಿಕೆಯಿಂದ ಒಂದು ಲಕ್ಷ ಪರಿಹಾರ ಬರಬೇಕಿದೆ. ಇದರ ಜತೆಗೆ ಸಂಘ ಸಂಸ್ಥೆಗಳು ಸಹ ತಮ್ಮ ಕೈಲಾದ ಸಹಾಯವನ್ನು ಮೃತರ ಕುಟುಂಬಕ್ಕೆ ಮಾಡಿದೆ. ಮಾನವೀಯ ಹಿನ್ನೆಲೆಯಲ್ಲಿ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಆಟೋ ರಾಜು, ಮಹಬೂಬ್ ಪಾಷ, ಮುಖಂಡರಾದ ಮೊಹಮ್ಮದ್ ಪೀರ್, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಕವಿತಾ, ಮಂಗಳ ಮತ್ತಿತರರು ಉಪಸ್ಥಿತರಿದ್ದರು.