ಮೃತ್ಯುಕೂಪದಂತಾಗಿರುವ ರಸ್ತೆಗಳು

ಲಕ್ಷ್ಮೇಶ್ವರ,ಮೇ25 : ಲೋಕೋಪಯೋಗಿ ಇಲಾಖೆಯ ಬಹುತೇಕ ರಸ್ತೆಗಳು ತುಂಡು ತುಂಡಾಗಿದ್ದು ಈ ರಸ್ತೆಗಳು ಮೃತ್ಯು ಕೋಪಗಳಾಗಿದ್ದು ವಾಹನ ಸವಾರರು ಮನೆ ಮುಟ್ಟಿದರೆ ಪುನರ್ಜನ್ಮ ಪಡೆದಂತೆಯೇ ಸರಿ.
ಇದಕ್ಕೆ ಬಡ್ನಿ ಆದ್ರಳ್ಳಿ ಮಧ್ಯದ ರಸ್ತೆ ಜೀವಂತ ಉದಾಹರಣೆಯಾಗಿದೆ ಕಳೆದ ಎರಡು ವರ್ಷಗಳಿಂದಲೂ ಈ ರಸ್ತೆಗೆ ಹಿಡಿ ಮಣ್ಣನ್ನು ಹಾಕದಿರುವುದರಿಂದ ಈಗ ರಸ್ತೆಯ ಸ್ಥಿತಿ ಭಯಾನಕ ವಾಗಿದೆ.
ಕಳೆದ ವರ್ಷ ಮಳೆಗಾಲದಲ್ಲಿ ವಿಪರೀತವಾದ ಮಳೆಯಿಂದಾಗಿ ಬಡ್ನಿ ಆದರಳ್ಳಿ ಮಧ್ಯದ ಸೇತುವೆ ಬಳಿ ರಸ್ತೆ ಕೊಚ್ಚಿಕೊಂಡು ಹೋಗಿ ಅನೇಕ ದಿನಗಳವರೆಗೆ ಸಂಚಾರಕ್ಕೆ ಈ ರಸ್ತೆಯು ಸಂಚಕಾರ ತಂದಿತ್ತು ಲೋಕೋಪಯೋಗಿ ಇಲಾಖೆಯವರು ಕೊಚ್ಚಿಕೊಂಡು ಹೋದ ನಂತರ ಜನಸಾಮಾನ್ಯರು ವಾಹನಗಳು ಅಡ್ಡಾಡಲು ತಾತ್ಕಾಲಿಕ ನಿರ್ಮಾಣ ಮಾಡಿದ್ದರು.
ಕಳೆದ ಒಂದು ವರ್ಷದಿಂದಲೂ ಈ ರಸ್ತೆಯ ಸ್ಥಿತಿ ಏನಾಗಿದೆ ಎಂಬುದನ್ನು ತಿರುಗಿಯು ನೋಡಲು ಸಾಧ್ಯವಾಗದ ಅಧಿಕಾರಿಗಳಿಗೆ ಹೊಸ ರಸ್ತೆಗಳ ಮೇಲೆ ಹೆಚ್ಚು ಮುತುವರ್ಜಿ ವಹಿಸುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ ಹಾಳಾದ ರಸ್ತೆಗಳನ್ನು ಜನರಿಗೆ ಅನುಕೂಲ ಮಾಡಿ ಕೊಡುವುದನ್ನು ಬಿಟ್ಟು ಹೊಸ ರಸ್ತೆಗಳ ಬಗ್ಗೆ ಕಳಕಳಿ ಏಕೆ ಎಂಬುದು ಪ್ರಶ್ನೆಯಾಗಿದೆ.
ಈ ಕುರಿತು ಬಡ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಗೌಡ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿ ಲೋಕೋಪಯೋಗಿ ಇಲಾಖೆಗೆ ಜಂಗಲ್ ಕಟಿಂಗ್ ಗೆ ರಸ್ತೆಯ ಗುಂಡಿಗಳನ್ನು ಮುಚ್ಚಲು ಕೋಟಿ ಕೋಟಿ ಅನುದಾನ ಬಿಡುಗಡೆಯಾದರು ಈ ರಸ್ತೆಗೆ ಹಿಡಿ ಮಣ್ಣು ಹಾಕದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.