ಮೃತರ ಮಕ್ಕಳಿಗೆ ಉಚಿತ ಶಿಕ್ಷಣ

ನವದೆಹಲಿ,ಜೂ.೫- ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮೃತರ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆಯನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿದ್ದಾರೆ.
ಒಡಿಶಾ ರೈಲು ದುರಂತದ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಘೋಷಿಸಿದ್ದು, ಇಂಟರ್‌ನ್ಯಾಷನಲ್ ಸ್ಕೂಲ್‌ನ ಬೋರ್ಡಿಂಗ್ ಸೌಲಭ್ಯದಲ್ಲಿ ಉಚಿತ ಶಿಕ್ಷಣ ನೀಡಲಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಟ್ವಿಟ್‌ನಲ್ಲಿ ಈ ಅಪಘಾತದ ನೋವಿನ ಚಿತ್ರವು ದೀರ್ಘಕಾಲ ನಮ್ಮನ್ನು ಕಾಡುತ್ತದೆ. ಈ ದುಃಖದ ಸಮಯದಲ್ಲಿ, ಈ ನೋವಿನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಕಾಳಜಿಯನ್ನು ನಾನು ಮಾಡಬಲ್ಲೆ. ಅಂತಹ ಮಕ್ಕಳಿಗೆ ಸೆಹ್ವಾಗ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಬೋರ್ಡಿಂಗ್ ಸೌಲಭ್ಯದಲ್ಲಿ ಉಚಿತ ಶಿಕ್ಷಣ ನೀಡುತ್ತೇನೆ. ಈ ಮೂಲಕ ಮೃತರ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದರೊಂದಿಗೆ, ಮತ್ತೊಂದು ಟ್ವೀಟ್‌ನಲ್ಲಿ ಅಪಘಾತದ ನಂತರ ರಕ್ಷಣಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಕೊಡುಗೆ ನೀಡಿದ ಎಲ್ಲ ಮಹಿಳೆಯರು ಮತ್ತು ಪುರುಷರಿಗೆ ಅವರು ಕೃತಜ್ಞತೆ ತಿಳಿಸಿದ್ದಾರೆ. ಇದೇ ವೇಳೆ, ಕೆಲವರು ಸ್ವಯಂ ಪ್ರೇರಿತರಾಗಿ ವೈದ್ಯಕೀಯ ತಂಡವನ್ನು ಸಂಪರ್ಕಿಸಿ ರಕ್ತದಾನ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದವರಿಗೂ ಅಭಿನಂದಿಸಿದ್ದಾರೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದಾರೆ.
ಒಡಿಶಾ ರೈಲು ಅಪಘಾತದ ಸುದ್ದಿಯಿಂದ ತಾನು ತೀವ್ರ ದುಃಖಿತನಾಗಿದ್ದೇನೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಶಕ್ತಿಯನ್ನು ನೀಡುವುದು ಮತ್ತು ಮಕ್ಕಳಿಗೆ ಉತ್ತಮ ನಾಳೆಗಳನ್ನು ಒದಗಿಸುವುದು ನಮ್ಮೆಲ್ಲರ ಜಂಟಿ ಜವಾಬ್ದಾರಿಯಾಗಿದೆ ಎಂದು ಗೌತಮ್ ಅದಾನಿ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಅಲ್ಲದೇ, ಈ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹವು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.