ಮೃತನೆಂದ ಭಾವಿಸಿದ್ದ ಯುವಕನ ಭುಜದ ಮೇಲೆ ಹೊತ್ತು ಬದುಕಿಸಿದ ಮಹಿಳಾ ಇನ್ಸ್‌ಪೆಕ್ಟರ್

ಚೆನ್ನೈ (ತಮಿಳುನಾಡು),ನ.11-ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ನೆನೆದು ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಮಹಿಳಾ ಇನ್ಸ್‌ಪೆಕ್ಟರ್ ಸಮಯಪ್ರಜ್ಞೆ ತೋರಿ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿ ರಕ್ಷಿಸಿದ್ದಾರೆ.
ಕಿಲ್ಪಾಕ್ ಪ್ರದೇಶದ ಸ್ಮಶಾನವೊಂದರಲ್ಲಿ ಕೆಲಸ ಮಾಡುವ ಉದಯ ಎಂಬ ವ್ಯಕ್ತಿ ಸ್ಮಶಾನ ಜಲಾವೃತವಾದ ಕಾರಣ ಅಲ್ಲಿಯೇ ಉಳಿದುಕೊಂಡಿದ್ದನು. ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ನೆನೆದು ಪ್ರಜ್ಞಾಹೀನವಾಗಿ ಅಲ್ಲಿಯೇ ಬಿದ್ದಿದ್ದಾನೆ. ಇದನ್ನು ಕಂಡ ಸ್ಥಳೀಯರು ಆತ ಸತ್ತು ಬಿದ್ದಿದ್ದಾನೆಂದು ಭಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಬಂದ ಟಿಪಿ ಛತ್ರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್ವರಿ ಅವರು ಪರಿಶೀಲಿಸಿದಾಗ ಆತ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಆತನನ್ನು ತಮ್ಮ ಭುಜದ ಮೇಲೆ ಹೊತ್ತು ಆಟೋ ಹತ್ತಿಸಿ, ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ದೃಶ್ಯದ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ತುರ್ತು ಪರಿಸ್ಥಿತಿಯಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಿ ವ್ಯಕ್ತಿಯ ಜೀವ ಉಳಿಸಿದ ಮಹಿಳಾ ಪೊಲೀಸ್​ ಶೌರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.