ಮೃಣಾಲ್‌ಗೆ ಭಾರೀ ಬೇಡಿಕೆ

ಮುಂಬೈ,ಏ.೧೮-ಬಹು ಬೇಡಿಕೆಯ ನಟಿ ಮೃಣಾಲ್ ಠಾಕೂರ್ ಪ್ರಸ್ತುತ ತೆಲುಗಿನಲ್ಲಿ ಸತತ ಚಿತ್ರಗಳನ್ನು ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದೀಗ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸಿದ್ದಾರೆ.
ಒಂದರ ಹಿಂದೆ ಒಂದರಂತೆ ಯಶಸ್ವಿ ಚಿತ್ರಗಳನ್ನು ನೀಡಿರುವ ಸೀತಾರಾಮಂ ಸುಂದರಿ ಸದ್ಯ ಅತ್ಯಂತ ಬೇಡಿಕೆಯ ನಟಿಯಾಗಿದ್ದಾರೆ. ತಮ್ಮೊಂದಿಗೆ ಪೈಪೋಟಿ ನೀಡಿದ ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟು ಮೃಣಾಲ್ ಗೆದ್ದು ಬೀಗಿದ್ದಾರೆ.
ಟಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದ ಪೂಜಾ ಹೆಗ್ಡೆ ಶ್ರೀಲೀಲಾ, ಕೃತಿ ಶೆಟ್ಟಿಗೆ ಸೆಡ್ಡು ಹೊಡೆದು ಮೃಣಾಲ್ ಠಾಕೂರ್ ಭಾರೀ ಅವಕಾಶಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತೆಲುಗು ಭಾಷೆ ಬರಲ್ಲ. ಸಿನಿಮಾ ಮಾಡಲ್ಲ ಅಂತಿದ್ದ ಮುಂಬೈ ಬೆಡಗಿ ಮೃಣಾಲ್ ಕಥೆ ಆಯ್ಕೆಯಲ್ಲಿಯೇ ಗೆದ್ದಿದ್ದಾರೆ.
ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಮೂರು ಚಿತ್ರಗಳು ಕಥೆ ವಿಚಾರದಲ್ಲಿ ಗೆದ್ದಿದೆ. ಮೃಣಾಲ್ ನಟನೆ ಮತ್ತು ಪಾತ್ರ ಜನರಿಗೆ ಮನಮುಟ್ಟಿದೆ. ಬ್ಯಾಕ್ ಟು ಬ್ಯಾಕ್ ೩ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಕಾರಣ ಹಿಂದಿ ಮತ್ತು ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ರತಿಷ್ಠಿತ ಸಂಸ್ಥೆಗಳಿಂದ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ.
ಬೇಡಿಕೆ ಹೆಚ್ಚಾಗುತ್ತಿದ್ದಂತೆ ಎರಡೂವರೆಯಿಂದ ೩ ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ ೫ ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ.
ಪೂಜಾ ಮೇರಿ ಜಾನ್ ಸೇರಿದಂತೆ ಹಲವು ಸಿನಿಮಾಗಳು ಮೃಣಾಲ್ ಕೈಯಲ್ಲಿವೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗೂ ನಟಿ ಸೆಲೆಕ್ಟ್ ಆಗಿದ್ದಾರೆ ಎನ್ನಲಾಗಿದೆ. ತೆಲುಗಿನ ಸ್ಟಾರ್ ನಟರಿಗೆ ನಾಯಕಿಯಾಗಲು ನಟಿಗೆ ಬುಲಾವ್ ಬಂದಿದೆ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ ನಟಿ.
೩೧ ವರ್ಷದ ಮುದ್ದಾದ ನಟಿ ಮೃಣಾಲ್ ತಮ್ಮ ಸೌಂದರ್ಯದಿಂದ ಸಾಕಷ್ಟು ಅವಕಾಶ ಪಡೆದಿದ್ದಾರೆ.