ಮೂವರ ಅಧಿಕಾರಿಗಳಿಗೆ ಕುಲಪತಿಯಿಂದ ಪದೋನ್ನತಿ – ವಿವಾದ

ಕೃಷಿ ವಿಶ್ವವಿದ್ಯಾಲಯ : ರೈತರ ಮಕ್ಕಳ ಮೀಸಲು ದುರ್ಬಳಕೆ ಪ್ರಕರಣ
ರಾಯಚೂರು.ಸೆ.೨೩- ಕೃಷಿ ವಿಶ್ವವಿದ್ಯಾಲಯದಲ್ಲಿ ರೈತರ ಕೋಟಾ ದುರ್ಬಳಕೆ ಮಾಡಿಕೊಂಡ ಆರೋಪ ಮತ್ತು ಉಚ್ಚ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿರುವಾಗ ಕುಲಪತಿಗಳು ಮೂವರಿಗೆ ಕೃಷಿ ವಿವಿಯ ಮಹತ್ವದ ಹುದ್ದೆಗಳನ್ನು ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಟಿ.ಮಾರೆಪ್ಪ ಅವರು ೪ ಪುಟಗಳ ಮನವಿಯೊಂದನ್ನು ಕುಲಪತಿಗಳಿಗೆ ಸಲ್ಲಿಸಿ, ಕೂಡಲೇ ಈ ನೇಮಕವನ್ನು ರದ್ದುಗೊಳಿಸಿ, ಆದೇಶ ಹೊರಡಿಸದಿದ್ದರೇ, ತಮ್ಮ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಎಚ್ಚರಿಸಿದ್ದಾರೆ. ಸೆ.೮ ರಂದು ಡಾ.ಭೀಮಸೇನ್ ರಾವ್ ದೇಸಾಯಿ ಅವರಿಗೆ ಸಂಶೋಧನಾ ವಿಭಾಗದ ನಿರ್ದೇಶಕರನ್ನಾಗಿ ನೇಮಿಸಿ, ಆದೇಶಿಸಲಾಗಿದೆ. ಸೆ.೨೦ ರಂದು ಡಾ.ಎಂ.ನೇಮಿಚಂದ್ರಪ್ಪ ಅವರನ್ನು ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾಗಿ ನೇಮಿಸಲಾಗಿದೆ. ಡಾ.ವೀರನಗೌಡ ಅವರನ್ನು ವಿಶ್ವವಿದ್ಯಾಲಯದ ರಿಜಿಸ್ಟ್ರರ್‌ರನ್ನು ಅದೇ ದಿನ ನೇಮಿಸಲಾಗಿದೆ. ಈಗಾಗಲೇ ಕೃಷಿ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ರೈತರ ಕೋಟಾದಡಿ ಮೀಸಲಿರುವ ವಿದ್ಯಾರ್ಥಿಗಳ ಪ್ರವೇಶವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಪ್ರವೇಶ ದೊರೆಕಿಸಿಕೊಡುವಂತೆ ಮಾಡಿದ ಆರೋಪದಲ್ಲಿ ಈ ಮೂವರು ಅಧಿಕಾರಿಗಳು ಶಾಮೀಲಾಗಿದ್ದು, ಇವರ ವಿರುದ್ಧ ಈಗಾಗಲೇ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಮಾಜಿ ಉಪ ಕುಲಪತಿ ಬಿ.ವಿ.ಪಾಟೀಲ್ ಅವರು ತಮ್ಮ ಮಗ ವಿನಯ್ ಪಾಟೀಲ್ ಅವರಿಗೆ ರೈತರ ಕೋಟಾದಡಿ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿ, ಪ್ರವೇಶ ಪಡೆದಿದ್ದರು. ಇದಕ್ಕೆ ಸಂಬಂಧಿಸಿ ನ್ಯಾಯಾಲಯ ಈಗಾಗಲೇ ತೀರ್ಪನ್ನು ನೀಡಿದೆ.
ಪ್ರಸ್ತುತ ರಿಜಿಸ್ಟ್ರರ್ ಆಗಿ ನೇಮಕಗೊಂಡಿರುವವರು ಸಹ ತಮ್ಮ ಪುತ್ರಿ ಸೌಮ್ಯ ಎನ್ನುವವರಿಗೆ ಪ್ರವೇಶ ದೊರೆಕಿಸಿಕೊಟ್ಟಿದ್ದರು. ಭೀಮಸೇನ್ ದೇಸಾಯಿ ಅವರು ತಮ್ಮ ಮಗನಾದ ಕೃಷ್ಣ ದೇಸಾಯಿ ಅವರಿಗೆ ಇದೇ ರೀತಿ ಅಕ್ರಮವಾಗಿ ಸೀಟ್ ದೊರೆಯುವಂತೆ ಮಾಡಿದ್ದರು. ನೇಮಿಚಂದ್ರಪ್ಪ ಅವರು ಈ ಪ್ರಕರಣದಲ್ಲಿ ಭಾಗೀಯಾಗಿದ್ದರು. ಅಲ್ಲದೇ, ಇತ್ತೀಚಿನ ವಿಧಾನಸಭಾ ಪರಿಷತ್ ಚುನಾವಣೆಯಲ್ಲಿ ನೇರವಾಗಿ ಚುನಾವಣೆ ಪ್ರಚಾರಕ್ಕೆ ತೆರಳಿದ ಆರೋಪದನ್ವಯ ವಿಚಾರಣೆ ಎದುರಿಸುತ್ತಿದ್ದಾರೆ. ಇಷ್ಟೆಲ್ಲಾ ಆರೋಪಗಳ ಹಿನ್ನೆಲೆಗಳಿಗೂ ಈ ಮೂವರಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಮಹತ್ವದ ಹುದ್ದೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ. ತಕ್ಷಣವೇ ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೇ, ಕುಲಪತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ನ್ಯಾಯಾಂಗ ನಿಂದನೆ ಹೂಡಲಾಗುತ್ತದೆಂದು ಟಿ.ಮಾರೆಪ್ಪ ಎಚ್ಚರಿಸಿದ್ದಾರೆ.