ಮೂವರು ಸುಲಿಗೆಕೋರರ ಸೆರೆ ೭೦ ಮೊಬೈಲ್ ವಶ

ಬೆಂಗಳೂರು,ಏ.೧೮- ಕಳವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತ ಒಂಟಿಯಾಗಿ ಓಡಾಡುವವರ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ಮೂವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ ೭೦ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಂದ್ರಾ ಲೇಔಟ್‌ನ ಇಮ್ರಾನ್‌ಖಾನ್ ಅಲಿಯಾಸ್ ಬಡಾ ಮಚ್ಚರ್ (೨೪), ಇಮ್ರಾನ್‌ಪಾಷ ಅಲಿಯಾಸ್ ಚೋಟಾ ಮಚ್ಚರ್ (೧೯) ಹಾಗೂ ಗಾಂಧಿನಗರದ ರಾಜುಸಿಂಗ್ (೨೭) ಬಂಧಿತ ಆರೋಪಿಯಾಗಿದ್ದಾರೆ. ಬಂಧಿತರಿಂದ ೮ ಲಕ್ಷ ೨೦ ಸಾವಿರ ಮೌಲ್ಯದ ೭೦ ಮೊಬೈಲ್‌ಗಳು, ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಹರೀಶ್‌ಪಾಂಡೆ ತಿಳಿಸಿದ್ದಾರೆ.
ಆರೋಪಿ ಬಡಾಮಚ್ಚರ್, ಜೆಸಿ ರಸ್ತೆಯಲ್ಲಿ ಕಾರುಗಳಿಗೆ ಸ್ಟಿಕ್ಕರಿಂಗ್ ಹಾಕುವ ಕೆಲಸ ಮಾಡಿಕೊಂಡಿದ್ದು, ದ್ವಿಚಕ್ರ ವಾಹನ ಹಾಗೂ ಮೊಬೈಲ್‌ಗಳನ್ನು ಹೆಚ್ಚಿನ ಹಣದಾಸೆಗೆ ಕಳವು ಮಾಡುತ್ತಿದ್ದು, ಆತನ ವಿರುದ್ಧ ೨ ಪ್ರಕರಣಗಳು ದಾಖಲಾಗಿವೆ.
ಆರೋಪಿ ಚೋಟಾ ಮಚ್ಚರ್ ಮೆಜೆಸ್ಟಿಕ್‌ನ ಫುಟ್ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು, ಸುಲಭವಾಗಿ ಹಣ ಗಳಿಸಲು ಮೊಬೈಲ್ ಸುಲಿಗೆ ಮಾಡುತ್ತಿದ್ದು, ಈತನ ವಿರುದ್ಧ ವಿವಿ ಪುರಂ, ಚಂದ್ರಾಲೇಔಟ್, ತಲಾ ಒಂದು ಸೇರಿದಂತೆ ಮೂರು ಪ್ರಕರಣಗಳು ದಾಖಲಾಗಿವೆ.
ಮತ್ತೊಬ್ಬ ಆರೋಪಿ ರಾಜುಸಿಂಗ್ ಗಾಂಧಿ ನಗರದ ಎಸ್.ಎನ್ ಬಜಾರ್‌ನಲ್ಲಿ ಮೊಬೈಲ್ ಸರ್ವಿಸ್ ಸೆಂಟರ್‌ನ್ನು ಇಟ್ಟುಕೊಂಡಿದ್ದು, ಆರೋಪಿಗಳು ಕಳವು ಮಾಡಿದ ಮೊಬೈಲ್‌ಗಳನ್ನು ಖರೀದಿಸಿ ಡಿಸ್‌ಪ್ಲೇ, ಕ್ಯಾಮರಾಗಳನ್ನು ಬೇರ್ಪಡಿಸಿ ರಿಪೇರಿಗೆ ಬರುವ ಸಾರ್ವಜನಿಕರ ಮೊಬೈಲ್‌ಗಳಿಗೆ ಹಾಕಿ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದ ಎಂದು ತಿಳಿಸಿದರು.
ಚಾಮರಾಜಪೇಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮೊಬೈಲ್ ಸುಲಿಗೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿ ರಚಿಸಲಾಗಿದ್ದ ವಿವಿ ಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಕಿರಣ್‌ಕುಮಾರ್ ನೇತೃತ್ವದ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ,