
ಮೈಸೂರು,ಜು.೧೬-ಕೃಷ್ಣರಾಜ ಸಾಗರ(ಕೆಆರ್ ಎಸ್)ದ ಹಿನ್ನೀರಿನಲ್ಲಿ ಈಜಲು ಹೋದ ಮುಳುಗಿ ಮೂವರು ಪದವಿ ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ನಗರದ ಸಂತ ಜೋಸೆಫ್ ಕಾಲೇಜಿನಲ್ಲಿ ಬಿಸಿಎ ಎರಡನೇ ವರ್ಷದಲ್ಲಿ ಓದುತ್ತಿದ್ದ ಪಡುವಾರಳ್ಳಿಯ ಪ್ರವೀಣ್, ರಾಮಕೃಷ್ಣನಗರದ ವರುಣ್ ಹಾಗೂ ಬಲ್ಲೇನಹಳ್ಳಿಯ ಭರತ್ ಮೃತಪಟ್ಟವರು.
ಪ್ರವೀಣ್, ಭರತ್, ವರುಣ್ ಮತ್ತಿತರ ಸ್ನೇಹಿತರು ಸೇರಿ ಪಿಕ್ನಿಕ್‌ಗೆಂದು ಮೀನಾಕ್ಷಿಪುರದಲ್ಲಿರುವ ಕೃಷ್ಣರಾಜಸಾಗರ ಹಿನ್ನೀರಿನ ಬಳಿ ತೆರಳಿ ಹಿನ್ನೀರಿನಲ್ಲಿ ಈಜಲು ಮುಂದಾಗಿದ್ದಾರೆ. ಆದರೆ ನೀರಿನ ಸೆಳೆತ ಜಾಸ್ತಿ ಇದ್ದಿದ್ದರಿಂದ ಈಜಲು ಸಾಧ್ಯವಾಗದೆ, ಮುಳುಗಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಇಲವಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕಳೆದ ಜೂನ್‌ನಲ್ಲಿ ಕೂಡ ಇದೇ ಜಾಗದಲ್ಲಿ ಇಬ್ಬರು ಎಂಜಿನಿಯರ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಕೆಆರ್‌ಎಸ್ ಹಿನ್ನೀರಿನಲ್ಲಿ ಈಜಲೆಂದು ಬಂದಿದ್ದ ಚಿರಂತ್ ಮತ್ತು ಸುನೀಲ್ ಎಂಬುವರು ಮುಳುಗಿ ಮೃತಪಟ್ಟಿದ್ದರು. ಇದರಲ್ಲಿ ಚಿರಂತ್ ಹಾಸನದವನಾಗಿದ್ದರೆ, ಸುನೀಲ್ ಬೀದರ್‌ನವನಾಗಿದ್ದ. ಮೈಸೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹುಡುಗರು ಅಂದು ಅರ್ಧಗಂಟೆ ಚೆನ್ನಾಗಿಯೇ ಈಜಿದ್ದರು. ಆದರೆ ಒಮ್ಮೆಲೇ ಪ್ರವಾಹದ ಸೆಳೆತಕ್ಕೆ ಸಿಲುಕಿ, ಮುಳುಗಿದ್ದರು. ಕೂಡಲೇ ರಕ್ಷಣೆಗೆ ಮುಂದಾದರೂ, ಇಬ್ಬರೂ ಬದುಕಿರಲಿಲ್ಲ.