ಮೂವರು ದರೋಡೆಕೋರರ ಬಂಧನ : ಕೃತ್ಯಕ್ಕೆ ಬಳಸಿದ ಓಮಿನಿ ವಾಹನ ವಶ

ಶಿವಮೊಗ್ಗ, ಅ.೧೮: ಜಿಲ್ಲೆಯ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಛತ್ರದಳ್ಳಿ ಗ್ರಾಮದ ಮಹಿಳೆಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿದ್ದ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಸೊರಬದ ಮಂಗಾಪುರದ ನಿವಾಸಿ ಪ್ರಶಾಂತ್ (೨೭), ಮೈಸೂರಿನ ಗಣೇಶ (೨೨), ಹಾವೇರಿ ಜಿಲ್ಲೆಯ
ಪ್ರಶಾಂತ (೨೦) ಬಂಧಿತ ಆರೋಪಗಳೆಂದು ಗುರುತಿಸಲಾಗಿದೆ.

’ಪ್ರಕರಣದಲ್ಲಿ ಇನ್ನು ಕೆಲವರನ್ನು ಬಂಧಿಸುವುದು ಬಾಕಿ ಇರುತ್ತದೆ. ಅವರನ್ನೂ ಸಹಾ ಶೀಘ್ರದಲ್ಲಿ ಕಾನೂನಿಗೊಳಪಡಿಸಲಾಗುವುದು.
ಪ್ರಕರಣದ ತನಿಖೆಯನ್ನು ಸೊರಬ ಸಿಪಿಐರವರು ಮುಂದುವರೆಸಿರುತ್ತಾರೆ’ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಪಿರ್ಯಾದುದಾರರ ಮನೆ ಕಟ್ಟುವ ಸಮಯದಲ್ಲಿ ಪಿರ್ಯಾದುದಾರರ ಕುಟುಂಬದವರಿಗೂ ಹಾಗೂ ಆರೋಪಿತರಿಗೂ ಹಣಕಾಸಿನ ವೈಮನಸ್ಸಿನ ಕಾರಣಗಳಿಂದ ಈ ಕೃತ್ಯ ನಡೆಸಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

’ತಾವು ಮನೆಯಲ್ಲಿರುವ ಸಮಯದಲ್ಲಿ ಯಾರೋ ೫ ಜನ ದರೋಡೆಕೋರರು ಮನೆಗೆ ನುಗ್ಗಿ, ತಮ್ಮ ಕೊರಳಿನಲ್ಲಿದ್ದ ಬಂಗಾರದ ಗುಂಡುಗಳಿದ್ದ ತಾಳಿ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು’ ಪಿರ್ಯಾದುದಾರರು
ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.