ಮೂವರು ಡಿಸಿಎಂ ಬಹಿರಂಗ ಹೇಳಿಕೆ ಬೇಡ:ಎಂಬಿಪಾ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಡಿ.೨೯:ಮೂವರು ಉಪಮುಖ್ಯಮಂತ್ರಿಗಳನ್ನು ಮಾಡುವ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ. ಪಕ್ಷದ ಒಳಗೆ ಈ ಬಗ್ಗೆ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವರು ಡಿಸಿಎಂಗಳನ್ನು ಮಾಡುವ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯ ಕುಳಿತು ನಾಯಕರ ಮುಂದೆ ನಮ್ಮ ಅಭಿಪ್ರಾಯ ಹೇಳುತ್ತೇವೆ. ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಕೈಗಾರಿಕಾ ಇಲಾಖೆಯ ವ್ಯಾಪ್ತಿಯಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಸಲಹಾ ಸೂಚನೆಗಳನ್ನು ಹೊರಡಿಸಲಾಗುವುದು ಎಂದ ಅವರು, ಉದ್ಯಮಗಳ ಸ್ಥಾಪನೆಗೆ ಜಗತ್ತಿನೆಲ್ಲೆಡೆ ಪೈಪೋಟಿ ಇದೆ. ಉದ್ಯಮಿಗಳಿಗೆ ಯಾವುದೇ ರಾಜ್ಯವು ಅನಿವಾರ್ಯವಲ್ಲ ಇಂತಹ ಸಂದರ್ಭದಲ್ಲಿ ಉದ್ಯಮಗಳ ನಾಮಫಲಕಕ್ಕೆ
ಸಂಬಂಧಿಸಿದಂತೆ ನಡೆದ ಗಲಾಟೆಗಳು, ಎಲ್ಲೆಡೆ ವೈರಲ್ ಆಗಿ ಉದ್ಯಮಿಗಳು ನಮ್ಮಲ್ಲಿ ಬಂಡವಾಳ ಹೂಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇದನ್ನೂ ಕನ್ನಡ ಪರ ಹೋರಾಟಗಾರರು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಕನ್ನೆ ನಾಮಫಲಕಗಳನ್ನು ಹಾಕಲು ಸರ್ಕಾರ ಗಡುವು ನಿಗದಿಪಡಿಸಿದೆ. ನಿಯಮದ ಪ್ರಕಾರ ಕನ್ನಡ ಬಳಸಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ, ಯಾರೂ ಏಕಾಏಕಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದರು.
ಬಿಜೆಪಿಯ ಬಸನಗೌಡಪಾಟೀಲ್ ಯತ್ನಾಳ್ ಅವರು ತಮ್ಮ ಪಕ್ಷದ ಸರ್ಕಾರದ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳದೆ ಇರುವುದನ್ನು ನೋಡಿದರೆ ಅವರ ಆರೋಪಗಳಲ್ಲಿ ಸತ್ಯಾಂಶವಿರಬಹುದು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಯತ್ನಾಳ್‌ರವರು ಕಳೆದ ಹಲವು ವರ್ಷಗಳಿಂದ ಸ್ವಪಕ್ಷೀಯರ ವಿರುದ್ಧವೇ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಕ್ರಮಕೈಗೊಳ್ಳಲಾರದಷ್ಟು ದುರ್ಬಲವಾಗಿದೆ ಎಂದು ವ್ಯಂಗ್ಯವಾಡಿದರು.
ಯತ್ನಾಳ್‌ರವರಿಗೆ ಕಾಂಗ್ರೆಸ್‌ಗೂ ಸಂಬಂಧವಿಲ್ಲ ಬಿಜೆಪಿಯವರು ತಮ್ಮ ಸಮಾಧಾನಕ್ಕೆ ಯತ್ನಾಳ್‌ರವರನ್ನು ಕಾಂಗ್ರೆಸ್ ಏಜೆಂಟ್ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ಹೇಳಿದರು.