ಮೂವರು ಖದೀಮರ ಬಂಧನ: ಲಕ್ಷಾಂತರ ಮಾಲು ವಶ

ತುಮಕೂರು, ಫೆ. ೧೭- ವಿವಿಧ ಜಿಲ್ಲೆಗಳಲ್ಲಿ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಕಳ್ಳರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿ, ೧೨ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ೧೯೫ ಕೆ.ಜಿ ಅಡಿಕೆ, ಬೈಕ್, ಕಾರು ಸೇರಿದಂತೆ ಒಟ್ಟು ೧೩.೫ ಲಕ್ಷ ರೂ. ಬೆಲೆಯ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ಮಡಕಶಿರಾ ತಾಲ್ಲೂಕಿನ ಸಂಕರಗಲ್ಲು ಗ್ರಾಮದ ಹರೀಶ್ ಅಲಿಯಾಸ್ ಲಗ್ಗೆರೆ ಹರೀಶ್ (೨೭), ಬೆಂಗಳೂರಿನ ಡಿ.ಆರ್.ಕಾರ್ತಿಕ್ (೨೪) ಹಾಗೂ ಮಡಕಶಿರಾ ತಾಲ್ಲೂಕು ಕೋತುಲಗುಟ್ಟದ ಕೆ.ಜಿ.ನರೇಶ್ (೨೬) ಎಂಬುವರೇ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ಜ. ೮ ರಂದು ಹೆಬ್ಬೂರಿನ ಆದಿನಾರಾಯಣಪ್ಪ ಎಂಬುವರ ಮನೆಯ ಬೀಗ ಮುರಿದು ೨೦೨ ಗ್ರಾಂ ಚಿನ್ನಾಭರಣ, ೧,೭೬೦ ಗ್ರಾಂ ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿದ್ದರು. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದಾಗ ಈ ಮೂವರು ಕುಖ್ಯಾತ ಖದೀಮರು ಸಿಕ್ಕಿ ಬಿದ್ದಿದ್ದಾರೆ.
ಕ್ಯಾತ್ಸಂದ್ರ, ಹೆಬ್ಬೂರು, ತುಮಕೂರು ಗ್ರಾಮಾಂತರ ಠಾಣೆಗಳಲ್ಲಿ ದಾಖಲಾದ ಮೂರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ದೊಡ್ಡಬಳ್ಳಾಪುರ, ಕೋಲಾರ ಹಾಗೂ ವಿವಿಧ ಜಿಲ್ಲೆಗಳಲ್ಲಿ ಹರೀಶ್ ವಿರುದ್ಧ ೧೬ ಪ್ರಕರಣ, ಕಾರ್ತಿಕ್ ವಿರುದ್ಧ ೧೨, ಕೆ.ಜಿ.ನರೇಶ್ ವಿರುದ್ಧ ೩ ಪ್ರಕರಣಗಳು ದಾಖಲಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಕ್ಯಾತ್ಸಂದ್ರ ಇನ್‌ಸ್ಪೆಕ್ಟರ್ ರಾಮಮೂರ್ತಿ, ಪಿಎಸ್‌ಐ ಎಸ್.ಎಸ್.ಚೇತನ್‌ಕುಮಾರ್, ಸಿಬ್ಬಂದಿಗಳಾದ ಆರ್.ಹನುಮರಂಗಯ್ಯ, ಬಿ.ಸಿದ್ದರಾಜು, ಸಾಗ್ಗೆರೆ ರಮೇಶ್, ಕೆ.ಆರ್.ರಂಗಸ್ವಾಮಿ, ಎಸ್.ಎಲ್.ಶಶಿಧರ್, ಅಹೋಬಲ ನರಸಿಂಹಮೂರ್ತಿ, ಕಿರಣ್, ಟಿ.ಎಚ್.ಶರಣಪ್ಪ, ಡಿ.ಆರ್.ಸಂತೋಷ್, ಆರ್.ಗಿರೀಶ್, ಟಿ.ಬಸವರಾಜು, ಪೊಲೀಸ್ ಕಚೇರಿಯ ನರಸಿಂಹರಾಜು, ರಮೇಶ್ ಕಾರ್ಯಾಚರಣೆ ನಡೆಸಿ ಸದರಿ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ.