ಮೂವರು ಕುಖ್ಯಾತ ಕನ್ನಗಳ್ಳರ ಸೆರೆ

ಬೆಂಗಳೂರು,ನ.೧೮-ಹಗಲು ರಾತ್ರಿ ಕನ್ನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಹೆಬ್ಬಾಳ ಪೊಲೀಸರು ೧೮ ಲಕ್ಷ ಮೌಲ್ಯದ ೩೫೦ ಗ್ರಾಂ ಚಿನ್ನಾಭರಣ ಹಾಗೂ ೧ ಕೆ.ಜಿ. ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ಗೌರಿಬಿದನೂರಿನ ಅಜಂತುಲ್ಲಾ(೩೦) ಹೆಣ್ಣೂರಿನ ಹೆಚ್ ಬಿಆರ್ ಲೇಔಟ್ ನ ಅರ್ಜುನ್ ಶರ್ಮಾ (೨೭)ಹಾಗೂ ಕೆಆರ್ ಪುರಂನ ಟಿಸಿ ಪಾಳ್ಯದ ಅರವಿಂದ(೨೩)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತರಿಂದ ೧೮ ಲಕ್ಷ ರೂ ಮೌಲ್ಯದ ೩೫೦ ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು ೧ ಕೆ.ಜಿ. ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿ ಅಜಂತುಲ್ಲಾ ಆರ್.ಟಿ.ನಗರ, ವಿಜಯನಗರ, ತುಮಕೂರು ಟೌನ್, ಹನುಮಂತನಗರ, ಎಲೆಕ್ಟ್ರಾನಿಕ್‌ಸಿಟಿ, ಚಂದ್ರಾಲೇಔಟ್, ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗಳಲ್ಲಿನ ಕೊಲೆ, ಸುಲಿಗೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದು ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ.
ಎರಡನೇ ಆರೋಪಿ ಅರ್ಜುನ್ ಶರ್ಮಾ ರಾಮಮೂರ್ತಿನಗರ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗಳಲ್ಲಿನ ಕಳ್ಳತನ, ಕೊಲೆ, ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದರೆ ಮೂರನೇ ಆರೋಪಿ ಅರವಿಂದ ಆರ್.ಟಿ.ನಗರ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ ಹೆಬ್ಬಾಳದ ಮನೆಕಳವು ಕನ್ನ ಕಳವು ಸೇರಿ ಎರಟು ಪ್ರಕರಣಗಳು ಪತ್ತೆಯಾಗವೆ.ಹೆಬ್ಬಾಳದಲ್ಲಿ ಕನ್ನಗಳವು ಕೃತ್ಯ ಬೆನ್ನತ್ತಿ ಕಾರ್ಯಾಚರಣೆ ಕೈಗೊಂಡ ಇನ್ಸ್‌ಪೆಕ್ಟರ್ ಚಿದಾನಂದ ಎಂ ಗದಗ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.