ಮೂವರು ಕಳ್ಳರ ಸೆರೆ: 65 ಮೊಬೈಲ್ ವಶ

ಬೆಂಗಳೂರು, ಏ. ೫- ಬೈಕ್‌ನಲ್ಲಿ ಸಂಚರಿಸುತ್ತಾ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವವರ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಎಂ.ಎಸ್. ಪಾಳ್ಯದ ಶಬ್ಬಾಶ್ ಖಾನ್ (೨೨), ಗಂಗೊಂಡನಹಳ್ಳಿಯ ಮಹಮದ್ ಷಫಿ (೨೩), ಹೊಸಹಳ್ಳಿ ಮುಖ್ಯ ರಸ್ತೆಯ ಅಫ್ಜಲ್ ಪಾಷ (೨೨) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ೧೭.೭೫ ಲಕ್ಷ ರೂ. ಮೌಲ್ಯದ ೫ ದ್ವಿಚಕ್ರ ವಾಹನಗಳು, ೬೦ ಮೊಬೈಲ್‌ಗಳು, ೧.೭೫ ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬೈಕ್‌ಗಳನ್ನು ಕಳವು ಮಾಡಿದ ಬೈಕ್‌ಗಳಲ್ಲಿ ಸಂಚರಿಸುತ್ತಾ ಒಂಟಿಯಾಗಿ ನಡೆದು ಹೋಗುವಾಗ ಮೊಬೈಲ್ ಫೋನ್‌ಗಳನ್ನು ಕಸಿದು ಪರಾರಿಯಾಗುತ್ತಿದ್ದರು. ಚಾಮರಾಜಪೇಟೆಯಲ್ಲಿ ಕಳೆದ ಮಾ. ೨೩ ರಂದು ನಡೆದಿದ್ದ ಮೊಬೈಲ್ ಕಳವು ಪ್ರಕರಣವನ್ನು ಬೆನ್ನತ್ತಿ ಇನ್ಸ್‌ಪೆಕ್ಟರ್ ಲೋಕಾಪುರ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಸಂಜೀವ್‌ಪಾಟೀಲ್ ತಿಳಿಸಿದ್ದಾರೆ.