ಮೂವರು ಎಲ್‌ಇಟಿ ಉಗ್ರರ ಬಂಧನ

ಸೋಪೋರ್,ಜ.೧೫- ಗಣರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ದೇಶದ ಕೆಲವೆಡೆ ಭಯೋತ್ಪಾದಕರು ದುಷ್ಕ್ರತ್ಯ ನಡೆಸಲು ಮಾಡಿರುವ ಸಂಚನ್ನು ಸೇನೆಯೂ ಹತ್ತಿಕ್ಕುವಲ್ಲಿ ಸಫಲವಾಗುತ್ತಿದೆ.
ಸೋಪೋರ್‌ನಲ್ಲಿ ಲಷ್ಕರ್ ಎ ತೋಯ್ಬಾದ ಮೂವರು ಓವರ್ ಗ್ರೌಂಡ್ ವರ್ಕರ್‌ಗಳನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದು, ಕೆಲವು ಶಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತಂತೆ ತನಿಖೆಯನ್ನು ಮುಂದುವರೆಸಲಾಗಿದೆ. ಜನವರಿ ೧೧ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮಾಹಿತಿಗೆ ಈಗ ಬಹಿರಂಗವಾಗಿದೆ. ಸೋಪೋರ್ ಪೊಲೀಸ್, ೨೨ ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್‌ನ ೧೭೯ ಬೆಟಾಲಿಯನ್ ಬೋಮೈ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಪೋರಾ ಬಳಿಯ ಚೀನಾರ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ.
ಗುಂದ್‌ಬ್ರಾಥ್ ಗ್ರಾಮದಿಂದ ಆ ಮೂವರು ಭಯೋತ್ಪಾದಕರು ಬೊಮೈ ಕಡೆಗೆ ತೆರಳುತ್ತಿದ್ದರು. ಅವರು ಅನುಮಾನಾಸ್ಪದವಾಗಿ ಕಂಡು ಬಂದ ಕಾರಣ, ನಿಲ್ಲುವಂತೆ ಪೊಲೀಸರು ಸೂಚನೆ ನೀಡಿದರು. ಈ ವೇಳೆ ಅವರು ಪರಾರಿಯಾಗಲು ಯತ್ನಿಸಿದ್ದರೂ, ಆದರೂ ಪಟ್ಟು ಬಿಡದ ಸೇನೆ ಮೂವರನ್ನೂ ಬಂಧಿಸಿದೆ. ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ ನಂತರ ೨ ಪಿಸ್ತೂಲ್ ಮ್ಯಾಗಜೀನ್, ೧೩ ಗುಂಡುಗಳು ಮತ್ತು ಒಂದು ಹ್ಯಾಂಡ್ ಗ್ರೆನೇಡ್ ಅನ್ನು ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
ಉಗ್ರರು ನಡೆಸುವ ವಿಧ್ವಂಸಕ ಕೃತ್ಯಗಳಿಗೆ ಸಹಾಯ ಮಾಡುವವರನ್ನು ಓವರ್ ಗ್ರೌಂಡ್ ವರ್ಕರ್ಸ್ ಎಂದು ಕರೆಯಲಾಗುತ್ತದೆ. ಉಗ್ರರಿಗೆ ಹಣ, ಆಶ್ರಯ ಇತರ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಇವರದ್ದಾಗಿರುತ್ತದೆ. ಕಲ್ಲು ತೂರಾಟ, ಗಲಭೆ ಸೃಷ್ಟಿ, ಉಗ್ರಗಾಮಿಗಳ ನೇಮಕ ವಿಚಾರದಲ್ಲಿ ಇವರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಅಂದಹಾಗೆ ಇವರೂ ಭಯೋತ್ಪಾದಕರೇ ಆಗಿರುತ್ತಾರೆ.