ಮೂಲ ಸ್ವರೂಪದಲ್ಲಿ ಝಂಡಾಕಟ್ಟೆ ನಿರ್ಮಾಣಕ್ಕೆ ಒತ್ತಾಯ

ದಾವಣಗೆರೆ,ನ.16: ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿರುವ ಎಂ.ಬಿ.ಕೇರಿಯ ಝಂಡಾ ಕಟ್ಟೆಯನ್ನು ಮೂಲ ಸ್ವರೂಪದಲ್ಲಿ ಮರು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ಮುಸ್ಲಿಂ ಬಾಂಧವರು ನಗರದಲ್ಲಿಂದ ಪ್ರತಿಭಟನೆ ನಡೆಸಿದರು.
ಇಲ್ಲಿನ ಪಾಲಿಕೆ ಆವರಣದಲ್ಲಿ ಜಮಾಯಿಸಿದ ಮುಸ್ಲಿಂ ಬಾಂಧವರು ಏಕಾಏಕಿ ಝಂಡಾ ಕಟ್ಟೆಯನ್ನು ತೆರವುಗೊಳಿಸಿದ ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್, ಸುಮಾರು 80ರಿಂದ 90ವರ್ಷಗಳ ಇತಿಹಾಸ ಇರುವ ಎಂ.ಬಿ.ಕೇರಿಯ ಝಂಡಾ ಕಟ್ಟೆಯು ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಝಂಡಾ ಕಟ್ಟೆಯನ್ನು ಏಕಾಏಕಿಯಾಗಿ ತೆರವುಗೊಳಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ ಕದಡಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮುಸ್ಲಿಂ ಸಮುದಾಯದ ಮಹಿಳೆಯರು, ಯುವಕರು ಪಾಲಿಕೆ ಆವರಣದಲ್ಲಿ ಪ್ರತುಭಟಿಸುತ್ತಿದ್ದಂತೆಯ ಸಮಾಜದ ಮುಖಂಡರಾದ ಜೆ.ಅಮಾನುಲ್ಲಾ ಖಾನ್, ಟಿ.ಅಸ್ಗರ್, ಜಮೀರ್ ಅಹ್ಮದ್ ಖಾನ್, ಯು.ಎಂ.ಮನ್ಸೂರ್ ಅಲಿಖಾನ್, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಪಾಲಿಕೆ ವಿರೋಧ ಪಕ್ಷ ನಾಯಕ ಎ.ನಾಗರಾಜ್, ಸದಸ್ಯ ಚಮನ್‌ಸಾಬ್ ಮತ್ತಿತರರು ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರನ್ನು ಭೇಟಿ ಮಾಡಿ, ನಗರದಲ್ಲಿ ಸಾಮರಸ್ಯದ ವಾತಾವರಣ ಮುಖ್ಯವಾಗಿದೆ. ಹೀಗಾಗಿ, ಝಂಡಾ ಕಟ್ಟೆ ತೆರವುಗೊಳಿಸಿರುವುದನ್ನು ಮುಂದುವರೆಸುವುದುಬೇಡ. ಇದನ್ನು ಇಲ್ಲಿ ಸುಖ್ಯಾಂತ ಗೊಳಿಸುವ ನಿಟ್ಟಿನಲ್ಲಿ ಝಂಡಾ ಕಟ್ಟೆಯನ್ನು ಮೂಲ ಸ್ವರೂಪದಲ್ಲಿ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಯಿಸಿದ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರು ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ಅವರೊಂದಿಗೆ ಚರ್ಚಿಸಿ, ಮೂಲಸ್ವರೂಪದ ಝಂಡಾ ಕಟ್ಟೆ ನಿರ್ಮಿಸಿಕೊಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ತೀರ್ಮಾನವನ್ನು ಸಮುದಾಯದ ಮುಖಂಡರು ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದವರಿಗೆ ತಿಳಿಸಿದ ನಂತರ ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಯಿತು.