ಮೂಲಸೌಲಭ್ಯ ವಂಚಿತ ಜರ್ಮಲಿ ಗ್ರಾಮ.

ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ. 15 :-  ಅಂದು ಪಾಳೇಗಾರರಾಳಿದ ಬೀಡು  ಇಂದು ಐದಾರು ಗ್ರಾಮಗಳ ಮುಖ್ಯ ಪಂಚಾಯತಿ ಕೇಂದ್ರವಾಗಿರುವ ಬಹುತೇಕ ಶೇ. 80% ರಷ್ಟು ಎಸ್ಸಿ ಎಸ್ಟಿ  ದಲಿತ ಸಮುದಾಯವೇ ವಾಸವಾಗಿರುವ  ಗ್ರಾಮದಲ್ಲಿ ಇದುವರೆಗೂ ಬಸ್ ನಿಲ್ದಾಣವಿಲ್ಲ ಮತ್ತು ಯಾವುದೇ ಸಮುದಾಯವರು ಸಭೆ ಸಮಾರಂಭ ಮಾಡಲು ಭವನವಿಲ್ಲದ ಮೂಲಸೌಲಭ್ಯ ವಂಚಿತಗ್ರಾಮವೆಂದರೆ ಅದು ಜರ್ಮಲಿ ಗ್ರಾಮವೆಂದರೆ ತಪ್ಪಾಗಲಾರದು.    ಹೌದು ಇದು ಅಕ್ಷರಶಃ ಸತ್ಯವಾಗಿದ್ದು ದೇವರ ಪಾದಗಟ್ಟೆಯ ಕಟ್ಟೆಯೇ ಈ ಗ್ರಾಮದ ಬಸ್ ನಿಲ್ದಾಣವಾಗಿದೆ ಗ್ರಾಮ ಹುಟ್ಟಿ ಇಷ್ಟು ವರ್ಷ ಕಳೆದರು ಗ್ರಾಮದ ಜನತೆಗೆ ಬಸ್ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಒಂದು ಬಸ್ ನಿಲ್ದಾಣ ಕೇಳದ ಮಾತಾಗಿದೆ ಜರ್ಮಲಿ ಸೇರಿದಂತೆ  ಎ.ದಿಬ್ಬದಹಳ್ಳಿ, ಹರವದಿ, ಗೆದ್ದಲಗಟ್ಟೆ ಮತ್ತು ಕಾಮಯ್ಯನಹಟ್ಟಿ   ನಾಲ್ಕೈದು ಗ್ರಾಮದ ಜನತೆ ಜರ್ಮಲಿ  ಗ್ರಾಮದಲ್ಲಿರುವ ಸೊಸೈಟಿಗೆ ಬಂದು ಪಡಿತರ ತೆಗೆದುಕೊಂಡು ಹೋಗಬೇಕು ಬಂದೋಗೋ ಜನರಿಗೆ ನಿಲ್ಲಲು ಕೂಡಲು ಬಸ್ ನಿಲ್ದಾಣ ಸಮಸ್ಯೆ ಎದ್ದು ಕಾಣುತಿದ್ದು ಪಡಿತರ ಒಯ್ಯುವ ಸಂದರ್ಭದಲ್ಲಿ ಮಳೆ ಬಂದರೆ ಆ ಪಡಿತರ ನೀರುಪಾಲು ಗ್ಯಾರಂಟಿ ಆ ಸಂದರ್ಭದಲ್ಲಿ    ದೇವರೇ ಕಾಪಾಡುವ ಪರಿಸ್ಥಿತಿ ಎದುರಾಗುತ್ತದೆ ಅಲ್ಲದೆ ದೇವರ ಪಾದಗಟ್ಟೆಯ ಸ್ಥಳವೇ ಬಸ್ ಕಾಯುವ ಜನರ ಕಟ್ಟೆಯಾಗಿದೆ ಇದು ಈ ಗ್ರಾಮದ ಪ್ರಯಾಣಿಕರ ದುಸ್ಥಿತಿಯಾಗಿದೆ.                        

ಜರ್ಮಲಿ ಪಾಳೇಗಾರರು ಆಳಿದ ನೆಲೆಬೀಡಾದರು ಹಾಗೂ ಸುಮಾರು ಶೇ 80ರಷ್ಟು ಎಸ್ಸಿ ಎಸ್ಟಿ ಸಮುದಾಯವೇ ವಾಸವಾಗಿರುವ ಈ ಗ್ರಾಮಕ್ಕೆ ಇದುವರೆಗೂ ಅಂಬೇಡ್ಕರ್ ಭವನವಾಗಲಿ ವಾಲ್ಮೀಕಿ ಭವನವಾಗಲಿ ನಿರ್ಮಾಣವಾಗಿಲ್ಲ ಇಲ್ಲಿ ಯಾವುದಾದರು ಸಮುದಾಯದ ಸಭೆ ಸಮಾರಂಭಕ್ಕೆ ಭವನದ ಕೊರತೆ ಎದ್ದುಕಾಣುತಿದ್ದು ಜನಪ್ರತಿನಿದಿನಗಳು, ಅಧಿಕಾರಿವರ್ಗ ಮೂಲಸೌಲಭ್ಯ ಒದಗಿಸುವಲ್ಲಿ ಕಣ್ಣಿದ್ದು ಕುರುಡರಂತಾಗಿದ್ದಾರೆ.      ಹದಿನೈದು ವರ್ಷದ ಈ ಹಿಂದೆ ಕೊಟ್ಟೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿದ್ದಾಗ ಮಾಜಿ ಸಚಿವೆ ಹಾಗೂ ಮಾಜಿಶಾಸಕಿ ಭಾಗೀರಥಿಮರುಳಸಿದ್ದನಗೌಡ ಅವರ ಸಂದರ್ಭದಲ್ಲಿ ನಿರ್ಮಾಣವಾದ ಸ್ತ್ರೀಶಕ್ತಿ ಭವನ ಮಾತ್ರ ಇದ್ದು ಇದು ಉದ್ಘಾಟನೆಯಾಗದೆ ಇಂದಿಗೂ ಹಾಗೇ ಉಳಿದಿದ್ದು ಕಿಟಕಿ ಬಾಗಿಲು ಕಿತ್ತು ಬಿರುಕುಬಿಟ್ಟಗೋಡೆಗಳಿಂದ ಶಿಥಿಲಾವಸ್ಥೆ ತಲುಪಿದೆ ಈ ಕಟ್ಟಡದಲ್ಲಿ ಅಂಬೇಡ್ಕರ್ ಕಾಲೋನಿಯ ನಿರಾಶ್ರಿತರೂ ವಾಸವಾಗಿದ್ದರೆಂದು ತಿಳಿದಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಗ್ರಾಮದ ಶ್ರೀ ದುರುಗಮ್ಮ ಜಾತ್ರೆಗೆ ಬಹುದೂರದ ಭಕ್ತರು ಬರುತ್ತಿದ್ದು ಬಂದೋಗೋ ಭಕ್ತರಿಗೆ ವಿಶ್ರಾಂತಿ ಕೊಠಡಿ ಸಹ ಇಲ್ಲವೆಂಬುದು ಗ್ರಾಮದ ಜನತೆಯ ಸೌಲಭ್ಯದೊರೆಯದ ಕೂಗಾಗಿದೆ.       
 ಶಾಸಕರ ಬಗ್ಗೆ ಆಶಯ :-
ಗ್ರಾಮದಲ್ಲಿ ಇದುವರೆಗೂ ಗ್ರಾಮ ಹುಟ್ಟಿ ಇಷ್ಟು ವರ್ಷವಾದರೂ ಸಾರ್ವಜನಿಕ ಬಸ್ ನಿಲ್ದಾಣ ಇಲ್ಲದಿರುವ ಬಗ್ಗೆ ಮತ್ತು ಎಸ್ಸಿ ಎಸ್ಟಿ ಸಮುದಾಯ ಹೆಚ್ಚಾಗಿರುವ ಗ್ರಾಮದಲ್ಲಿ ಸಭೆ ಸಮಾರಂಭ ನಡೆಸಲು ಇದುವರೆಗೂ ಅಂಬೇಡ್ಕರ್ ಹಾಗೂ ವಾಲ್ಮೀಕಿ ಭವನ ನಿರ್ಮಿಸಲು ಗ್ರಾಮ ಪಂಚಾಯತಿ ಕೇಂದ್ರವಾಗಿದ್ದರು ಮೂಲ ಸೌಲಭ್ಯ ವಂಚಿತ ಗ್ರಾಮಕ್ಕೆ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸದಾ ಶ್ರಮಿಸುವ ಶಾಸಕ ಎನ್ ವೈ ಗೋಪಾಲಕೃಷ್ಣ ಈ ಗ್ರಾಮಕ್ಕೆ  ಮೂಲಭೂತ  ಸೌಲಭ್ಯ ನೀಡುತ್ತಾರೆಂಬ  ಗ್ರಾಮದ ತಿಪ್ಪೇಸ್ವಾಮಿ, ದುರುಗೇಶ ಹಾಗೂ ಇತರೆ ಜನತೆ  ಆಶಯ ವ್ಯಕ್ತಪಡಿಸುತ್ತಿದ್ದಾರೆ.