ಮೂಲಸೌಕರ್ಯ ಒದಗಿಸಲು ಎಐಡಿವೈಓ ಆಗ್ರಹ

ವಾಡಿ: ಮಾ.24: ಪಟ್ಟಣ ಸಮೀಪದ ರಾವೂರ ಗ್ರಾಮದ ಪ್ರತಿಯೊಂದು ವಾರ್ಡಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಗ್ರಾಮ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ಗ್ರಾಪಂ ಅಧ್ಯಕ್ಷೆ ದೇವಕಿ ನಾರಾಯಣ ಮಿನಿಗಿಲೇರ ಅವರಿಗೆ ಮನವಿಪತ್ರ ಸಲ್ಲಿಸಿರುವ ಎಐಡಿವೈಒ ಮುಖಂಡರು, ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಪಂಚಾಯತಿ ಆಡಳಿತದ ಗಮನ ಸೆಳೆದಿದ್ದಾರೆ.

ರಾವೂರ ಗ್ರಾಮವು ಶಹಾಬಾದ ತಾಲೂಕಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಳ್ಳಿಯಾಗಿದೆ. ಗ್ರಾಮ ಪಂಚಾಯಿತಿ, ತಾಪಂ ಹಾಗೂ ಜಿಲ್ಲಾ ಪಂಚಾಯಿತಿ ಕೇಂದ್ರಸ್ಥಾನವಾಗಿದೆ. ಹತ್ತಿರದಲ್ಲೇ ಕಾಗಿಣಾ ನದಿ ಹರಿಯುತ್ತಿದೆ. ಕಲ್ಲು ಗಣಿಗಳ ತವರೂರಾಗಿದೆ. ಆದರೆ ಇಲ್ಲಿನ ಗ್ರಾಮಸ್ಥರಿಗೆ ಕುಡಿಯಲು ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ಚರಂಡಿಗಳ ಸ್ವಚ್ಚತೆ ಮಾಡಲಾಗುತ್ತಿಲ್ಲ. ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗಲು ಸೂಕ್ತ ರಸ್ತೆಯ ಸೌಲಭ್ಯವಿಲ್ಲ.

ಮಹಿಳಾ ಶೌಚಾಲಯಗಳ ನಿರ್ಮಾಣ ಮಾಡದ ಕಾರಣ ಬಯಲು ಶೌಚಾಲಯಗಳಿದ್ದು, ಗ್ರಾಮದ ಸುತ್ತಲೂ ಅನಾರೋಗ್ಯಕರ ವಾತಾವರಣ ಸೃಷ್ಠಿಯಾಗಿದೆ. ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದ್ದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಚರಂಡಿಗಳ ದುರ್ವಾಸನೆ ಸಹಿಸಲಾಗುತ್ತಿಲ್ಲ. ನೇತಾಡುವ ವಿದ್ಯುತ್ ತಂತಿಗಳಿಂದ ಅಪಾಯವಿದ್ದರೂ ಅವುಗಳ ದುರಸ್ಥಿಕಾರ್ಯ ನಡೆಯುತ್ತಿಲ್ಲ. ಅನೇಕ ಬಡಾವಣೆಗಳಲ್ಲಿ ಸಿಸಿ ರಸ್ತೆಗಳಿಲ್ಲ. ಕಸ ವಿಲೇವಾರಿ ಮತ್ತು ಬ್ಲೀಚಿಂಗ್ ಪೌಡರ್ ಸಿಂಪರಣೆ ಸಮರ್ಪಕವಾಗಿಲ್ಲ ಎಂದು ದೂರಿದ್ದಾರೆ. ತಕ್ಷಣವೇ ಬೇಡಿಕೆಗಳ ಈಡೇರಿಕೆಗೆ ಮುಂದಾಗದಿದ್ದರೆ ಪಂಚಾಯಿತಿ ಆಡಳಿತ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಐಡಿವೈಒ ವಾಡಿ ವಲಯ ಕಾರ್ಯದರ್ಶಿ ಗೌತಮ ಪರ್ತೂರಕರ ಎಚ್ಚರಿಸಿದ್ದಾರೆ.

ಎಐಡಿವೈಒ ಮುಖಂಡರಾದ ದತ್ತಾತ್ರೇಯ ಹುಡೇಕರ, ಮಹಮಮದ ದಿಗ್ಗಾಂವ, ನಾಗೇಶ ಪವಾರ, ಅಸ್ಲಂ ಮದರಿ, ಮೌಲಾ ದಿಗ್ಗಾಂವ, ರಜನಿಕಾಂತ ಸಾಗನೂರ, ಸಿರಾಜ್ ಕಮರವಾಡಿ, ಇಬ್ರಾಹಿಂ ಆಂದೋಲಾ ಇದ್ದರು.