ಮೂಲಸೌಕರ್ಯಗಳ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು ಅತ್ಯಗತ್ಯ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಫೆ.22; ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ಅವರ ಆರೋಗ್ಯ ಕಾಪಾಡುವುದು ಅತಿ ಅವಶ್ಯಕವಾಗಿದೆ ಎಂದು ಜಿ.ಪಂ. ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾಕರು ಮತ್ತು ಅಡುಗೆ ಸಿಬ್ಬಂದಿಗಳಿಗೆ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಾಸ್ಟೆಲ್ ವಿದ್ಯಾರ್ಥಿಗಳು ತಂದೆ ತಾಯಿಗಳನ್ನು ಬಿಟ್ಟು ವಿದ್ಯಾರ್ಥಿನಿಲಯದ ಮೇಲ್ವಿಚಾರಕರು ಮತ್ತು ಅಲ್ಲಿನ ಸಿಬ್ಬಂದಿಗಳ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಅವಕಾಶಗಳ ಕೊರತೆ ಮತ್ತು ಬಡತನದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಿಗೆ ಆಗಮಿಸುತ್ತಾರೆ. ಆದ್ದರಿಂದ ಮೇಲ್ವಿಚಾರಕರು ಅವರನ್ನು ಪ್ರೀತಿ ಮತ್ತು ಕಾಳಜಿ ಯಿಂದ ನೋಡಿಕೊಳ್ಳಬೇಕು. ಆಹಾರ ತಯಾರಿಯಲ್ಲಿ ಸ್ವಚ್ಚತೆ, ಗುಣಮಟ್ಟ ಕಾಪಾಡಿಕೊಂಡು ಬರಬೇಕು.ಅಡುಗೆಯ ಸಿಬ್ಬಂದಿಗಳು ಮತ್ತು ಮೇಲ್ವಿಚಾರಕರು ನಡುವೆ ಹೊಂದಾಣಿಕೆ ಅಗತ್ಯವಾಗಿದ್ದು ಹಾಸ್ಟೆಲ್ ಗಳಲ್ಲಿ ಯಾವುದೇ ಸಮಸ್ಯೆಗಳು ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು. ಹಾಗೂ ವಿದ್ಯಾರ್ಥಿಗಳ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ವ್ಯತ್ಯಾಸಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ಕುರಿತು ಗಮನ ನೀಡುವುದು ನಿಮ್ಮ  ಜವಬ್ದಾರಿ ಆಗಿದೆ ಎಂದು ಸೂಚಿಸಿದರು.