ಮೂಲಸೌಕರ್ಯಕ್ಕೆ ಒತ್ತಾಯಿಸಿ ಮನವಿ


ನವಲಗುಂದ, ನ 28: ತಾಲ್ಲೂಕಿನ ನಾಗನೂರ ಗ್ರಾಮದಲ್ಲಿರುವ ಹಳ್ಳಿಕೇರಿ ಪ್ಲಾಟಗಳಲ್ಲಿ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸದೇ ಇರುವುದರಿಂದ ಮನೆಗಳು ಹಾನಿಯಾಗಿ ವಾಸವಾಗಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು, ಪ್ಲಾಟ್‍ಗೆ ಹೋಗುವ ರಸ್ತೆ ಕೂಡ ಹದಗೆಟ್ಟಿದ್ದು ಆದಷ್ಟು ಬೇಗನೆ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಜಿಲ್ಲಾ ಗ್ರಾಮೀಣ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ ನೇತೃತ್ವದಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ಅವರಿಗೆ ಮನವಿ ಸಲ್ಲಿಸಲ್ಲಾಯಿತು.
ಸುಮಾರು 100 ಮನೆಗಳಿದ್ದು 275 ಜನರು ಕಳೆದ 50 ವರ್ಷಗಳಿಂದ ವಾಸವಾಗಿದ್ದಾರೆ. ಈ ಗ್ರಾಮದ ವ್ಯಾಪ್ತಿಗೆ ಬರುವ ಗುಡಿಸಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಗಿದೆ. ಆದರೆ ಅವರು ಈ ಪ್ಲಾಟ್‍ಗಳಲ್ಲಿ ಕೆರೆ ಇದ್ದು, ಕೆರೆ ಇರುವ ಜಾಗದಲ್ಲಿ ಯಾವುದೇ ಮೂಲಸೌಕರ್ಯ ಒದಗಿಸಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ. ಕಾರಣ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಅಲ್ಲಿನ ನಿವಾಸಿಗಳು ತಹಶೀಲ್ದಾರೆಗೆ ಮನವಿ ಸಲ್ಲಿಸಿದರು.
ನವಲಗುಂದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಪುರಸಭೆ ಅಧ್ಯಕ್ಷ ಮಂಜು ಜಾಧವ, ಗ್ರಾಮಸ್ಥರಾದ ಅದುಮಸಾಬ್ ಮರಬದ, ಮಕ್ತುಮಸಾಬ ಬೆಟಗೇರಿ, ದಾವಲಸಾಬ ಒಳ್ಳೆಪ್ಪನವರ, ವಿರುಪಾಕ್ಷಪ್ಪ ಮಾಕಣ್ಣವರ, ಹನಮಂತಪ್ಪ ಕುರಿ, ಮಕ್ತುಮಬಾಸ ಮರಬದ, ದಾವಲಸಾಬ ಮರಬದ, ಹಸನಸಾಬ ಬೆಟಗೇರಿ ಉಪಸ್ಥಿತರಿದ್ದರು.