ಮೂಲವ್ಯಾಧಿ ಮನೆ ಮದ್ದು

೧. ತುಳಸಿ ಎಲೆ, ಕರಿಮೆಣಸು, ಹಸಿಈರುಳ್ಳಿ ೩, ಸಮಪ್ರಮಾಣದಲ್ಲಿ ನುಣ್ಣಗೆ ಅರೆದು ಗೋಲಿಗಾತ್ರದ ಉಂಡೆಮಾಡಿ ಬೆಳಿಗ್ಗೆ – ಸಂಜೆ ೨-೨ ಉಂಡೆ ತಿನ್ನುತ್ತಾ ಬಂದರೆ, ೫ – ೬ ದಿನಗಳಲ್ಲಿ ಮೂಲವ್ಯಾಧಿ ಕಡಿಮೆಯಾಗುವುದು.
೨. ಆಸನದಲ್ಲಿ ಆಗುವ ಉರಿ, ನೋವು ಇಂತಹ ಸಮಸ್ಯೆಗೆ ನೇರಳೆ ಮರದ ಎಲೆ ಹಾಗೂ ಮಾವಿನ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಬೇರೆ ಬಿಸಿನೀರಿಗೆ ಹಾಕಿ ೧ ಟಬ್‌ನಲ್ಲಿ ಹಾಕಿ ೫ ನಿಮಿಷ ಕುಳಿತರೆ ನೋವು ಕಡಿಮೆಯಾಗುತ್ತದೆ.
೩. ಮಲದ ಜೊತೆ ರಕ್ತ ಹೋಗುತ್ತಿದ್ದರೆ, ನಿಂಬೆಗಿಡದ ಹೂ ಮತ್ತು ಬೇರನ್ನು ಅರೆದು, ಅಕ್ಕಿ ತೊಳೆದ ನೀರಿನಲ್ಲಿ ಕದಡಿ ಕುಡಿದರೆ ಅನುಕೂಲವಾಗುತ್ತದೆ.
೪. ಸಿಹಿಗುಂಬಳದ ಚಿಗುರೆಲೆಗಳನ್ನು ಅಡುಗೆಯಲ್ಲಿ ಬಳಸುವುದು ಹಾಗೂ ಸಿಹಿಗುಂಬಳದ ಬಳಕೆ ಎರಡೂ ಮೂಲವ್ಯಾಧಿಯವರಿಗೆ ಹಿತಕರ.
೫. ನುಗ್ಗೆಎಲೆ ಹಾಗೂ ಎಕ್ಕದ ಎಲೆಯನ್ನು ನುಣ್ಣಗೆ ಅರೆದು ಮೂಲವ್ಯಾಧಿಯ ಮೊಳಕೆಗಳಿಗೆ ಲೇಪಿಸುವುದರಿಂದ ಮೊಳಕೆಗಳು ದಿನಕ್ರಮೇಣ ನಾಶವಾಗುತ್ತವೆ.
೬. ಸುವರ್ಣಗೆಡ್ಡೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಈ ಪುಡಿಯನ್ನು ಹಸಿಮೂಲಂಗಿ ರಸದಲ್ಲಿ ಬೆರೆಸಿ ಪ್ರತಿನಿತ್ಯ ಕೆಲವು ದಿನಗಳ ಕಾಲ ಸತತವಾಗಿ ಸೇವಿಸುವುದರಿಂದ ಮೂಲವ್ಯಾಧಿ ಹಾಗೂ ಮಲಬದ್ಧತೆ ನಿವಾರಣೆಯಾಗುತ್ತದೆ.
೭. ಹೊನಗೊನೆಸೊಪ್ಪು ಹಾಗೂ ಮೂಲಂಗಿ ಸೊಪ್ಪಿನ ರಸವನ್ನು ಸತತವಾಗಿ ಸೇವಿಸುವುದರಿಂದ ಮೂಲವ್ಯಾಧಿಯ ಹಿಂಸೆ, ನೋವು ಕಡಿಮೆಯಾಗುತ್ತದೆ.
೮. ಒಣಖರ್ಜೂರ ಹಾಗೂ ಒಣದ್ರಾಕ್ಷಿ ಎರಡನ್ನೂ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಆರಿದ ನಂತರ ಚೆನ್ನಾಗಿ ಕಿವುಚಿ, ನಂತರ ಶೋಧಿಸಿ, ಪುನ: ಆರಿಸಿ ಗಾಜಿನ ಸೀಸೆಗೆ ಹಾಕಿಟ್ಟುಕೊಂಡು ಇದನ್ನು ೨೧ ದಿನಗಳ ಕಾಲ ಕುಡಿದರೆ, ಮಲಬದ್ಧತೆ, ಮೂಲವ್ಯಾಧಿ ಎಲ್ಲಕ್ಕೂ ಉತ್ತಮ ಪರಿಹಾರ ಸಿಗುತ್ತದೆ.
೯. ರಕ್ತ ಮೂಲವ್ಯಾಧಿ: ಹಾಗಲಕಾಯಿ ರಸ ಅಥವಾ ಹಾಗಲಕಾಯಿ ಎಲೆ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಕೆಲವು ದಿನಗಳ ಕಾಲ ಬೆಳಿಗ್ಗೆ ಸೇವಿಸುತ್ತಾ ಬಂದರೆ ರಕ್ತ ಮೂಲವ್ಯಾಧಿಗೆ ಸಾಕಷ್ಟು ಅನುಕೂಲವಾಗುತ್ತದೆ.
೧೦. ಹೆಸರುಕಾಳನ್ನು ನೆನೆಸಿ ಇದಕ್ಕೆ ೫ – ೬ ಬೇವಿನ ಎಲೆಯನ್ನು ಹಾಕಿ ರುಬ್ಬಿಕೊಂಡು ಇದಕ್ಕೆ ಚಿಟಿಕೆ ಉಪ್ಪು ಹಾಕಿ ಕಲಸಿ ತುಪ್ಪದಲ್ಲಿ ಪಕೋಡಾ ರೀತಿ ಕರಿದು ೨೧ ದಿನಗಳ ಕಾಲ ತಿನ್ನುತ್ತಾ ಬಂದರೆ ಹಾಗೂ ಆಹಾರದಲ್ಲಿ ಸ್ವಲ್ಪ ಪತ್ಯ ಇದ್ದರೆ ಶೀಘ್ರವಾಗಿ ಮೂಲವ್ಯಾಧಿ ಗುಣವಾಗುವುದು.
೧೧. ಹಸಿಈರುಳ್ಳಿಯನ್ನು ತುರಿದು ತಕ್ಷಣ ಮೊಸರಿಗೆ ಹಾಕಿ ಚಿಟಿಕೆ ಉಪ್ಪು ಹಾಕಿ ಹಾಗೇ ಪ್ರತಿನಿತ್ಯ ಬೆಳಿಗ್ಗೆ ಸೇವಿಸುತ್ತಾ ಬಂದರೆ ಮೂಲವ್ಯಾಧಿಯ ನೋವು, ಹಿಂಸೆ ಎಲ್ಲವೂ ಕಡಿಮೆ ಆಗುತ್ತದೆ.
೧೨. ಹಾಗಲಕಾಯಿ ಗಿಡದ ಬೇರನ್ನು ತಂದು ತೇಯ್ದು ಅದರ ಗಂಧವನ್ನು ಗುದದ್ವಾರಕ್ಕೆ ಲೇಪಿಸುವುದರಿಂದ ಉರಿ, ನೋವು, ಗಾಯ ಆಗಿರುವುದು ಎಲ್ಲದ್ದಕ್ಕೂ ಒಳ್ಳೆಯದು.
೧೩. ಮುಟ್ಟಿದರೆ ಮುನಿ ಸೊಪ್ಪಿನ ಹೂವನ್ನು ಹೊರತುಪಡಿಸಿ ಎಲೆ, ಗಿಡ, ಬೇರು ಸಹಿತ ಸಂಪೂರ್ಣ ಗಿಡವನ್ನು ತೊಳೆದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಂಡು ಅದನ್ನು ೭ ದಿನಗಳ ಕಾಲ ಬೆಳಿಗ್ಗೆ, ಸಂಜೆ ೨ ಬಾರಿ ಸೇವಿಸುತ್ತಾ ಬನ್ನಿ, ಆಹಾರದಲ್ಲಿ ಹಾಲನ್ನ, ಗಂಜಿ ಈ ರೀತಿ ಪಥ್ಯದ ಊಟ ಮಾಡಿದರೆ ಶೀಘ್ರವಾಗಿ ಗುಣವಾಗುತ್ತದೆ.
೧೪. ೧ ಅಳತೆ ಕರಿಎಳ್ಳಿಗೆ ಅರ್ಧ ಅಳತೆ ಕಲ್ಲುಸಕ್ಕರೆ ಹಾಕಿ ಚೆನ್ನಾಗಿ ಅರೆಯಿರಿ. ಅದನ್ನು ೧ ಚಮಚದಷ್ಟು ಸೇವಿಸಿ, ೧ ಲೋಟ ಆಡಿನ ಹಾಲನ್ನು ಕುಡಿಯುವುದರಿಂದ ಮೂಲವ್ಯಾಧಿಯಲ್ಲಿ ರಕ್ತ ಹೋಗುವುದು ಕಡಿಮೆ ಆಗುತ್ತದೆ.
೧೫. ಎಕ್ಕದ ಎಲೆ ಹಾಗೂ ನುಗ್ಗೆಸೊಪ್ಪು ಎರಡನ್ನೂ ಸಮಪ್ರಮಾಣ ತೆಗೆದುಕೊಂಡು ಅದನ್ನು ನುಣ್ಣಗೆ ಅರೆದು ಗುದದ್ವಾರದಲ್ಲಿ ಲೇಪಿಸುತ್ತಾ ಬಂದರೆ, ಮೂಲವ್ಯಾಧಿಯ ಮೊಳಕೆಯು ಕ್ರಮೇಣ ನಾಶವಾಗುವುದು.
೧೬. ಹುಣಸೆಬೀಜದ ಸಿಪ್ಪೆ ತೆಗೆದು ಒಳಗಿನ ಬಿಳಿಬಣ್ಣದ ಬೀಜವನ್ನು ನುಣ್ಣಗೆ ಪುಡಿ ಮಾಡಿ ಅದನ್ನು ದಿನಕ್ಕೆ ೨ ಬಾರಿ ಸೇವಿಸುತ್ತಾ ಬಂದರೆ ಮೂಲವ್ಯಾಧಿಯು ಗುಣವಾಗುತ್ತದೆ.
೧೭. ಅಳಲೆಕಾಯಿ ಚೂರ್ಣವನ್ನು ಬೆಲ್ಲದೊಂದಿಗೆ ಬೆರೆಸಿ ಪ್ರತಿದಿನ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಕ್ರಮೇಣ ಗುಣವಾಗುವುದು.
೧೮. ಅಮೃತಬಳ್ಳಿಯಿಂದ ತೆಗೆದ ಸತ್ವಕ್ಕೆ ಕಲ್ಲುಸಕ್ಕರೆಯನ್ನು ಪುಡಿಮಾಡಿ ಬೆರೆಸಿಟ್ಟುಕೊಂಡು ಇದನ್ನು ಪ್ರತಿದಿನ ಸೇವಿಸುವುದರಿಂದ ಮೂಲವ್ಯಾಧಿ ಗುಣಮುಖವಾಗಲು ಸಹಕಾರಿಯಾಗುತ್ತದೆ.
೧೯. ಬಸಳೆ ಸೊಪ್ಪನ್ನು ಪ್ರತಿನಿತ್ಯ ಪಲ್ಯ ಮಾಡಿ ಸೇವಿಸುತ್ತಾ ಬಂದರೆ, ದಿನಕ್ರಮೇಣ ಮೂಲವ್ಯಾಧಿಯ ಹಿಂಸೆ ಕಡಿಮೆ ಆಗುವುದು.
೨೦. ಇಸಬ್‌ಗೋಲ್ ಬೀಜವನ್ನು ರಾತ್ರಿ ಮಲಗುವ ಮುನ್ನ ನೆನೆಸಿ ಸೇವಿಸುವುದರಿಂದ ಮಲಬದ್ಧತೆ ಹಾಗೂ ಮೂಲವ್ಯಾಧಿ ಹಿಂಸೆ ಕಡಿಮೆ ಆಗುವುದು.