ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಶ್ರಮಿಕ ನಗರ ನಿವಾಸಿಗಳ ಪ್ರತಿಭಟನೆ

ಮಂಡ್ಯ: ಮಾ.28:- ಬಡಶ್ರಮಿಕನಗರ ನಿವಾಸಿಗಳು ಹೋರಾಡಿ ಪಡೆದುಕೊಂಡ ಸವಲತ್ತುಗಳನ್ನು ಬಡವರ ಭೂಮಿಯನ್ನು, ಅವರಿಗೆ ಸಿಗದಂತೆ ಸಂಚು ರೂಪಿಸಿ,ಬಲಾಢ್ಯರ ಪರ ನಿಂತಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ,ಕರ್ನಾಟಕ ಜನಶಕ್ತಿ ಹಾಗೂ ಮಹಿಳಾ ಮುನ್ನಡೆಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ನಗರಸಭೆ ಮುಂಭಾಗ ನಿರಂತರ ಪ್ರತಿಭಟನಾ ಧರಣಿ ಆರಂಭಿಸಲಾಯಿತು.
ನ್ಯೂ ತಮಿಳ್ ಕಾಲೋನಿಯ ನಿವಾಸಿಗಳ 139 ಗುಂಟೆ ಜಾಗವನ್ನು 1979 ರಲ್ಲಿ ಸ್ಲಂ ಜಾಗ ಎಂದು ಘೋಷಣೆ ಮಾಡಲಾಗಿದೆ. ಆದರೆ ಅಲ್ಲಿಯ ನಿವಾಸಿಗಳಿಗೆ ಇನ್ನೂ ಹಕ್ಕು ಪತ್ರಗಳಾಗಲಿ ವಾಸಕ್ಕೆ ಯೋಗ್ಯವಾದ ಮನೆಗಳಾಗಲಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ ಇವತ್ತಿನ ನಮ್ಮ ಸರ್ಕಾರ ಆಡಳಿತ ವ್ಯವಸ್ಥೆ, ಮತ್ತು ಅಧಿಕಾರಿಗಳು ಉಳ್ಳವರ ಪರವಾಗಿ,ಶ್ರೀಮಂತರ ಪರವಾಗಿ ನಿಂತಿರುವುದು ಇದಕ್ಕೆ ಕಾರಣವಾಗಿದೆ ಎಂದು ಆಪಾದಿಸಿದರು.
1979 ರಲ್ಲಿ ಸ್ಲಂ ಜನರಿಗೆಂದು ಘೋಷಣೆಯಾದ ಜಾಗವನ್ನು,1983 ರಲ್ಲಿ ನಗರಸಭೆ ವತಿಯಿಂದ ಅಲ್ಲಿ ವಾಸವಿಲ್ಲದ 34 ಜನರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದೆ. ನಗರಸಭೆ ಅಧಿಕಾರಿಗಳ ಇಂತಹ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಅಕ್ರಮ ಖಾತೆಯನ್ನು ರದ್ದು ಪಡಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ಮತ್ತು ವಸತಿಯ ಸೌಲಭ್ಯವನ್ನು ಕಲ್ಪಸಬೇಕೆಂದು ಹಲವಾರು ಹೋರಾಟಗಳನ್ನು ಮಾಡಿ ನೂರಾರು ಹಕ್ಕೊತ್ತಾಯಗಳನ್ನು ನೀಡಿದ್ದರೂ ಕ್ರಮ ವಹಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ನಾವು ಧರಣಿಗೆ ಇಳಿದರೆ ನಾವೇ ತಪ್ಪು ಮಾಡಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾವಿಸುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ನಮ್ಮ ಬೇಡಿಕೆಗಳು ಜಾರಿಯಾಗದಿದ್ದರೆ, ತಪ್ಪನ್ನು ಸರಿಪಡಿಸದೆ ನಿರ್ಲಕ್ಷ್ಯ ವನ್ನು ತೋರಿದರೆ ಶ್ರಮಿಕ ಜನರು ನಗರಸಭೆಗೆ ಮುತ್ತಿಗೆ ಹಾಕಿ ಅಲ್ಲಿಯೇ ವಾಸ್ತವ್ಯವನ್ನು ಹೂಡಿ ನಗರಸಭೆಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ವಾಸಕ್ಕೆ ಯೋಗ್ಯವಾದ ಮನೆಗಳ ನಿರ್ಮಾಣಕ್ಕೆ ಮುಂದಾಗುವಂತೆ ಕ್ರಮ ಜರುಗಿಸಬೇಕು.ಅಲ್ಲಿ ವಾಸಿಸುತ್ತಿರುವ ಜನರಿಗೆ ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು. ನಿರ್ದಿಷ್ಟವಾದ ಕಾಲಮಿತಿಯೊಳಗೆ ಸಮಸ್ಯೆಗಳನ್ನು ಬಗೆ ಹರಿಸಬೇಕು ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಸಲು ತೀರ್ಮಾನಿಸಲಾಗುತ್ತದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಿಂಗಮ್ಮ, ವಿಜಯಮ್ಮ, ಅಣ್ಣಾ ಮುರುಗನ್, ಶಕ್ತಿವೇಲ್ ಮುಂತಾದವರು ಭಾಗವಹಿಸಿದ್ದರು.