ಮೂಲಭೂತ ಸೌಲಭ್ಯ ಒದಗಿಸಲು ಅಗ್ರಹಿಸಿ ಪ್ರತಿಭಟನೆ

ಲಕ್ಷ್ಮೇಶ್ವರ,ನ.24: ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳು ಸರಿಯಾಗಿ ಇಲ್ಲದೆ ಇರುವದರಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಅದಕ್ಕಾಗಿ ಗ್ರಾಮದಲ್ಲಿ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಸಮೀಪದ ಆದರಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.
ತಾಲೂಕಿನ ಆದರಹಳ್ಳಿ ಗ್ರಾಮ ಪಂಚಾಯತಿ ಎದುರಿನಲ್ಲಿ ಮುಂಜಾನೆ ಪ್ರತಿಭಟನೆ ಪ್ರಾರಂಭಿಸಿದ ಗ್ರಾಮಸ್ಥರು ಗ್ರಾ.ಪಂ ಯಿಂದ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲದೆ ಜನರು ಪರಿತಪಿಸುತ್ತಿದ್ದು, ಕುಡಿಯುವ ನೀರು, ಬೀದಿ ದೀಪ, ಚರಂಡಿ ಸ್ವಚ್ಚತೆ ಇಲ್ಲದೆ ಗ್ರಾಮಕ್ಕೆ ಯಾರು ಸಹ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಭಾವನೆ ತೋರುತ್ತಿದ್ದಾರೆ. ಪದೆ ಪದೆ ಸೌಲಭ್ಯಗಳಿಗಾಗಿ ಅಲೆದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಳೆದ ಅನೇಕ ತಿಂಗಳಿನಿಂದ ಯಾವುದೇ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಬೀದಿ ದೀಪ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ ಹಾಗೂ ಗ್ರಾಮದ ಚರಂಡಿ ಸ್ವಚ್ಛತೆ ಮಾಡದೇ ಇರುವದರಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು ಜನರು ಅನೇಕ ರೋಗಗಳಿಗೆ ತುತ್ತಾಗಿದ್ದಾರೆ. ಅನೇಕ ಬಾರಿ ಗ್ರಾಮ ಪಂಚಾಯತಿಯವರಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಹಾಗೂ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಗವಿಮಠಕ್ಕೆ ಬೀದಿ ದೀಪ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಗ್ರಾಮಸ್ಥರು ಮನವಿ ಮಾಡಿದರು ಅದಕ್ಕೂ ಕೂಡ ಸ್ಪಂದನೆ ಮಾಡುತ್ತಿಲ್ಲ. ಗವಿಮಠಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದು, ರಾತ್ರಿಯ ವೇಳೆಯಲ್ಲಿ ಬೀದಿ ದೀಪಗಳಿಲ್ಲದೆ ಇತ್ತಿಚೇಗೆ ಅನೇಕ ಜನರು ವಾಹಗಳಲ್ಲಿ ಅಪಘಾತಕ್ಕೀಡಾಗಿದ್ದಾರೆ, ಎಲ್ಲ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಂಚಾಯತಿ ಕೂಡಲೇ ಮುಂದಾಗದಿದ್ದಲ್ಲಿ ಹೋರಾಟವನ್ನು ಮುಂದುವರೆಸಲಾಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಗ್ರಾ.ಪಂ ಅಧ್ಯಕ್ಷ ಹೊನ್ನಪ್ಪ ವಡ್ಡರ ಹಾಗೂ ಗ್ರಾಪಂ ಸದಸ್ಯರು ಗ್ರಾಮಸ್ಥರ ದೂರುಗಳನ್ನು ಆಲಿಸಬೇಕಾಯಿತು. ಸಮಸ್ಯೆಗಳನ್ನು ಬಗೆಹರಿಸಲು ಪಂಚಾಯತಿಯಿಂದ ಸಾಕಷ್ಟು ಕಾರ್ಯಗಳನ್ನು ಮಾಡಲಾಗಿದ್ದು, ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅವಶ್ಯವಿರು ಸೌಲಭ್ಯಗಳನ್ನು ವದಗಿಸಲು ಪಂಚಾಯತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು, ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿ ಗ್ರಾಮದ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದು ಕೂಡಲೇ ಭರವಸೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತಿಗೆ ಬೀಗ ಜಡಿದು ಉಗ್ರ ಹೋರಾಟ ಕೈಗೊಳ್ಳಲಾಗುವದು ಎಂದು ಯುವ ಮುಖಂಡ ನಾಗಪ್ಪ ಲಮಾಣಿ ಮತ್ತಿತರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಲಕ್ಷ್ಮಣ ವಡ್ಡರ, ರಾಜೆಸಾಬ ಸನದಿ, ದೇವಪ್ಪ ಲಮಾಣಿ, ಗೋಪಾಲ ಲಮಾಣಿ, ಲಕ್ಷ್ಮಣ ಲಮಾಣಿ, ದ್ಯಾಮಣ್ಣ ಲಮಾಣಿ, ರಮೇಶ ರಾಥೋಡ, ಹಸನಸಾಬ ವಾಲೀಕಾರ ಮಾನಪ್ಪ ಲಮಾಣಿ, ನಾಗೇಶ ಲಮಾಣಿ, ಬಸವರಾಜ ಕಾಮನವರ, ಅಲ್ಲಾಭಕ್ಷಿ ವಾಲೀಕಾರ, ಮಾಂತೇಶ ಹರಿಜನ, ಸಿದ್ದಪ್ಪ ದೇಸಾಯಿ, ವಿಷ್ಣು ಬಂಜಾರ ಸೇರಿದಂತೆ ಮುಂತಾದವರು ಹಾಜರಿದ್ದರು.