ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಜಿಡಿಎ ನಿವಾಸಿಗಳಿಂದ ಪ್ರತಿಭಟನೆ

ಕಲಬುರಗಿ.ನ.05: ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಗುರುವಾರ ಶ್ರೀ ಸಾಧನಾ ಮಹಿಳಾ ಸ್ವ ಸಹಾಯ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿವಾಸಿಗಳು ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಈಗಾಗಲೇ ಹಲವಾರು ಬಾರಿ ಈ ಕುರಿತು ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾಲೋನಿಯಲ್ಲಿ ಕುಡಿಯುವ ನೀರು, ವಿದ್ಯುತ್ ದ್ವೀಪಗಳ ವ್ಯವಸ್ಥೆ, ಕಸದ ವಿಲೇವಾರಿ, ಹಾಳಾದ ರಸ್ತೆಗಳ ದುರಸ್ತಿ ಮುಂತಾದ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾಲೋನಿಯಲ್ಲಿ 18 ಎಕರೆ ಪ್ರದೇಶದಲ್ಲಿ ಶ್ರೀ ರಾಜೀವಗಾಂಧಿ ಥೀಮ್ ಪಾರ್ಕ್ ಕಾಮಗಾರಿ ಅಪೂರ್ಣಗೊಂಡಿದ್ದು, ಕೂಡಲೇ ಪೂರ್ಣಗೊಳಿಸುವಂತೆ ಆಗ್ರಹಿಸಿದ ಅವರು, ವಾಚನಾಲಯ, ಬಸ್ ನಿಲ್ದಾಣ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ಬಡಾವಣೆಯು ಗುಲಬರ್ಗಾ ವಿಶ್ವವಿದ್ಯಾಲಯ ಪೋಲಿಸ್ ಠಾಣೆಯ ವ್ಯಾಪ್ತಿಗೆ ಒಳಪಡುತ್ತಿದ್ದು, ಅದನ್ನು ಸ್ಟೇಷನ್ ಬಜಾರ್ ಪೋಲಿಸ್ ಠಾಣೆಗೆ ವರ್ಗಾವಣೆಗೊಳಿಸಲು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಸಂಘದ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ಬಿ. ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಶ್ರೀಮತಿ ಪವಿತ್ರಾ ಎಂ. ಪಂಚಾಳ್, ಖಜಾಂಚಿ ಶ್ರೀಮತಿ ಸ್ವರಾಜ್ಯ ಲಕ್ಷ್ಮೀ ಕೆ.ವಿ. ಸೇರಿದಂತೆ ನಿವಾಸಿಗಳು ಪಾಲ್ಗೊಂಡಿದ್ದರು.