ಮೂಲಭೂತ ಸೌಕರ್ಯ ಪರಿಶೀಲನೆ


ಧಾರವಾಡ, ಜು.16: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್ ದೊಡಮನಿ ಅವರು ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮಕ್ಕೆ ಹಾಗೂ ಹುಬ್ಬಳ್ಳಿ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಮತ್ತು ಸಾರ್ವಜನಿಕರ ಹಾಗೂ ಖೈದಿಗಳ ಕುಂದುಕೊರತೆ ಆಲಿಸಿದರು.
ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲವೆಂದು ಸಾರ್ವಜನಿಕರ ದೂರು ಆಗಿತ್ತು. ಕುಂದಗೋಳ ತಹಶೀಲ್ದಾರ ಶೈಲೇಶ ಪರಮಾನಂದ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು. ಸದರಿ ಸ್ಥಳಕ್ಕೆ ಹೋದ ಸುಮಾರು ಒಂದು ತಾಸಿನ ನಂತರ ಜೆ.ಜೆ.ಎಂ. ಮೂಲಕ ಮೊದಲ ಬಾರಿಗೆ ಗ್ರಾಮಕ್ಕೆ ನೀರನ್ನು ಪೂರೈಸಲಾಯಿತು. ಗ್ರಾಮಕ್ಕೆ ಆಸರೆಯಾಗಿರುವ 3 ಕೆರೆಗಳಲ್ಲಿ ಹೂಳು ತುಂಬಿರುವ ಕುರಿತು ಗ್ರಾಮಸ್ಥರ ದೂರಿನ ಮೇರೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯನ್ನು ವೀಕ್ಷಣೆ ಮಾಡಿದರು. ಹಂತ ಹಂತವಾಗಿ ಕೆರೆಗಳಲ್ಲಿ ಹೂಳನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೆಗೆದು ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡಲು ಕೆರೆಗಳ ದಂಡೆಗಳಲ್ಲಿ ಉಪಯುಕ್ತವಾದ ಸಸಿ ನೆಡಲು ಅವರು ಸೂಚಿಸಿದರು.
ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಭೇಟಿ ನೀಡಿ, ಕೆಲವು ಕೊಠಡಿಗಳು ಜೀರ್ಣಾವಸ್ಥೆಯಲ್ಲಿದ್ದು ಮಕ್ಕಳಿಗೆ ಅಪಾಯವಾಗುವ ಸಂದರ್ಭಗಳಿದ್ದು ಆ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.