ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಆಗ್ರಹಿಸಿ ಮನವಿ

ಇಂಡಿ:ನ.6:ಪಟ್ಟಣದ ಪುರಸಭೆ ವ್ಯಾಪ್ತಿಯ 18 ನೇ ವಾರ್ಡಿನಲ್ಲಿ ಬರುವ ಪಂಚಶೀಲ ನಗರಕ್ಕೆ ಕಾಂಕ್ರೆಟ್ ರಸ್ತೆ,ಬೀದಿ ದೀಪ,ವಿದ್ಯುತ್ ಕಂಬ ,ವ್ಯವಸ್ಥಿತ ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಹಾಗೂ ದಲಿತ ಸೇನೆ ತಾಲೂಕು ಅಧ್ಯಕ್ಷ ಶಿವಾನಂದ ಮೂರಮನ ಪುರಸಭೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶಿವಾನಂದ ಮೂರಮನ,ಪಂಚಶೀಲ ನಗರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಈಗಾಗಲೆ ನಾಲ್ಕೈದು ವರ್ಷದಿಂದ ಪುರಸಭೆ ಅ„ಕಾರಿಗಳಿಗೆ ಮನವಿ ಮಾಡುತ್ತಲೆ ಬರಲಾಗಿದೆ.ಪಂಚಶೀಲ ನಗರಕ್ಕೆ ವಿದ್ಯುತ್ ಕಂಬಗಳು ಇಲ್ಲದೆ ಇರುವುದರಿಂದ ರಾತ್ರಿಯಾದರೆ ಕತ್ತಲೆ ಆವರಿಸುತ್ತದೆ.ಚರಂಡಿ ಸೌಲಭ್ಯ ಇಲ್ಲದಕ್ಕಾಗಿ ಚರಂಡಿ ನೀರು ರಸ್ತೆ ಮೇಲೆ ಹರಿದು ಸೊಳ್ಳೆಗಳ ತಾಣವಾಗಿವೆ. ಸರಿಯಾದ ರಸ್ತೆಗಳು ಇಲ್ಲದಿರುವುದರಿಂದ ಚರಂಡಿ ನೀರು ರಸ್ತೆಯ ಗುಂಡಿಗಳನ್ನು ತುಂಬಿಕೊಂಡು ದುರ್ವಾಸನೆ ಹರಡಿದೆ.ಪಂಚಶೀಲ ನಗರ ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದೆ.ಕೂಡಲೆ ಈ ನಗರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಪಂಚಶೀಲ ನಗರ ಭೇಟಿ ನೀಡಿ ಪರಿಶೀಲಿಸಿದ ಪುರಸಭೆ ಅಧ್ಯಕ್ಷೆ ಶೈಲಜಾ ಪೂಜಾರಿ ಪತಿ ಶ್ರೀಶೈಲ ಪೂಜಾರಿ,ಉಪಾಧ್ಯಕ್ಷ ಇಸ್ಮಾಯಿಲ ಅರಬ,ಎರಡ್ಮೂರು ತಿಂಗಳಲ್ಲಿ ಪಂಚಶೀಲ ನಗರದ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.ಗುತ್ತಿಗೆದಾರ ದಸ್ತಗೀರ ಇಂಡಿಕರ ಹಾಗೂ ಪಂಚಶೀಲ ನಗರದ ಸಾರ್ವಜನಿಕರು ಈ ಸಂದರ್ಭದಲ್ಲಿ ಇದ್ದರು.