ಮೂಲಭೂತ ಸೌಕರ್ಯ ಒದಗಿಸಲು ಮನವಿ

ಬ್ಯಾಡಗಿ, ಮಾ25: ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರಿಗೆ ತಹಶೀಲ್ದಾರ ರವಿಕುಮಾರ ಕೊರವರ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಎನ್. ಹುಚ್ಚೇರ ಅವರು, ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಒದಗಿಸಲು ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಗಣಕೀಕರಣ ವ್ಯವಸ್ಥೆಯು ಇಂದಿನ ದಿನಮಾನದಲ್ಲಿ ಹೆಚ್ಚಾಗಿದ್ದು, ಇದಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರದ ಮೂಲಕ ಲ್ಯಾಪ್ ಟಾಪ್, ಟ್ಯಾಬ್, ಮೊಬೈಲ್, ಸಿಮ್, ಪವರ್ ಬ್ಯಾಂಕ್, ಮುದ್ರಣ ಯಂತ್ರ ಹಾಗೂ ಅನ್ ಲಿಮಿಟೆಡ್ ಡೇಟಾ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಕ್ರಮ ವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆಯ್.ಎಸ್. ಮಳಿಯಣ್ಣನವರ, ಕಾರ್ಯದರ್ಶಿ ಬಿ.ಎನ್. ಖವಾಸ್, ಗುಂಡಪ್ಪ ಹುಬ್ಬಳ್ಳಿ, ಶಬ್ಬೀರ್ ಬಾಗೇವಾಡಿ, ಎಂ.ಎ.ತಹಶೀಲ್ದಾರ, ಶೃತಿ ಮೈದೂರ, ಸರಸ್ವತಿ ಕುರುಬನಹಳ್ಳಿ, ಹೇಮಾ ಗಳಗನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.