ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿ

ಕುಣಿಗಲ್, ನ. ೧೫- ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಒಳಗೊಂಡಂತೆ ಪ್ರತಿಯೊಬ್ಬ ಸದಸ್ಯರು ತಾಳ್ಮೆಯಿಂದ ಪ್ರಾಮಾಣಿಕವಾಗಿ ಜನರ ಮೂಲಭೂತ ಸೌಕರ್ಯಗಳ ಕಡೆ ಗಮನಹರಿಸಬೇಕು ಎಂದು ಶಾಸಕ ಡಾ. ಎಚ್.ಡಿ. ರಂಗನಾಥ ಸಲಹೆ ನೀಡಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ಕೆ. ನಾಗೇಂದ್ರ ರವರಿಗೆ ಪುರಸಭೆಯ ಆಡಳಿತ ಅಧಿಕಾರಿಗಳಾಗಿದ್ದ ತುಮಕೂರು ಉಪವಿಭಾಗಾಧಿಕಾರಿ ಅಜಯ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪಟ್ಟಣದ ನಾಗರಿಕರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಪುರಸಭೆ ಅಧಿಕಾರವನ್ನು ನೀಡಿದ್ದಾರೆ. ಆದ್ದರಿಂದ ನೂತನ ಅಧ್ಯಕ್ಷರಾದ ನಾಗೇಂದ್ರ ಹಾಗೂ ಉಪಾಧ್ಯಕ್ಷರಾದ ಮಂಜುಳಾ ಪಕ್ಷಾತೀತವಾಗಿ ಪ್ರತಿಯೊಬ್ಬ ಪುರಸಭಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಯತ್ತ ಹೆಚ್ಚು ಒತ್ತು ನೀಡಬೇಕು. ಇದಕ್ಕೆ ನನ್ನ ಹಾಗೂ ಸಂಸದ ಡಿಕೆ ಸುರೇಶ್ ಅವರ ಸಹಕಾರ ಇರುತ್ತದೆ ಎಂದರು.
ಪಟ್ಟಣದಲ್ಲಿ ಮನೆ ನಿರ್ಮಿಸುವವರಿಗೆ ಲೈಸೆನ್ಸ್ ನೀಡುವುದರಲ್ಲಿ ೧೯೭೧ ರ ಸರ್ಕಾರದ ಕಾನೂನು ಅಡ್ಡ ಬರುತ್ತಿದೆ. ಈ ಸಂಬಂಧ ನಾನು ಸರ್ಕಾರ ಅಕ್ರಮ-ಸಕ್ರಮವನ್ನು ಜಾರಿಗೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೋರಾಟ ಮಾಡುತ್ತೇನೆ ಎಂದರು.
ಆಡಳಿತ ಅಧಿಕಾರಿಗಳಾಗಿದ್ದ ತುಮಕೂರು ಉಪವಿಭಾಗಾಧಿಕಾರಿ ಅಜಯ್ ಮಾತನಾಡಿ, ಅಧಿಕಾರ ಸಿಕ್ಕಿದೆ, ಪ್ರಾಮಾಣಿಕವಾಗಿ ನಾಗರಿಕರ ಕೆಲಸ ಮಾಡಿ. ನಿಮ್ಮ ಜತೆ ಪ್ರತಿಯೊಂದು ಹಂತದಲ್ಲೂ ಶಾಸಕರಾದ ರಂಗನಾಥ್ ಸಹಕಾರ ನೀಡುತ್ತಾರೆ. ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ಅಧ್ಯಕ್ಷರು ಒಳಗೊಂಡಂತೆ ಪ್ರತಿಯೊಬ್ಬ ಸದಸ್ಯರು ಸಿಬ್ಬಂದಿಗಳಿಗೆ ಸಹಕರಿಸಬೇಕು. ಸಿಬ್ಬಂದಿಗಳ ಕೊರತೆ ನೀಗಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ನೂತನ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಶಾಸಕರಾದ ರಂಗನಾಥ್ ಹಾಗೂ ಸಂಸದರಾದ ಡಿ.ಕೆ. ಸುರೇಶ್ ರವರ ಮಾರ್ಗದರ್ಶನದಲ್ಲಿ ಹಾಗೂ ಪ್ರತಿಯೊಬ್ಬ ಸದಸ್ಯರ, ಸಿಬ್ಬಂದಿಗಳ, ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಗರೆಡ್ಡಿ, ಪುರಸಭೆ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.