ಮೂಲಭೂತ ವಿಜ್ಞಾನದ ಅರಿವು ಮೂಡಿಸಲು ಕರೆ

ಕೋಲಾರ, ನ,೧೨:ಬೆಳೆಯುತ್ತಿರುವ ಪ್ರಪಂಚದಲ್ಲಿ ಜ್ಞಾನ ಮತ್ತು ವಿಜ್ಞಾನದ ಜತೆಗೆ ಅರಿವಿನ ಕೊರತೆ ಇದೆ ಇದನ್ನು ಸಾಧಿಸಲು ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ನಮಗೆ ಹೆಚ್ಚಿನ ಮೂಲಭೂತ ವಿಜ್ಞಾನದ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಅಭಿಪ್ರಾಯಪಟ್ಟರು.
ಜಿಲ್ಲಾ ಕರ್ನಾಟಕ ಮಾರ್ಗದ ವಿದ್ಯಾ ತಂತ್ರಜ್ಞಾನದ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಶಾಖೆ ಗುರುವಾರ ನಗರದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವವಿಜ್ಞಾನ ದಿನದ ಈ ವಷದ ಥೀಮ್ ಸುಸ್ಥಿರ ಅಭಿವೃದ್ಧಿಗಾಗಿ ಮೂಲ ವಿಜ್ಞಾನ ಎಂಬ ಆಶಯ ಹೊತ್ತ ಚಿಂತನೆ ಎಲ್ಲೆಡೆ ನಡೆಯಬೇಕಾಗಿದೆ. ಇದರೊಂದಿಗೆ ಸಮಾಜದಲ್ಲಿ ವಿಜ್ಞಾನದ ಪಾತ್ರ ಉದಯೋನ್ಮುಖ ವೈಜ್ಞಾನಿಕ ವಿಚಾರಗಳು ಆಗಿದ್ದಾಗ್ಯೂ ಚರ್ಚೆ ಚಿಂತನೆ ನಡೆಸುವ ಮೂಲಕ ಸಮಾಜದ ಪ್ರಗತಿಗಾಗಿ ಶ್ರಮಿಸುವ ಅಗತ್ಯವಿದೆ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಬಾಲಾಜಿ ಮಾತನಾಡಿ ಶಾಂತಿ ಮತ್ತು ಅಭಿವೃದ್ಧಿಗಾಗಿ ಮೂಲ ವಿಜ್ಞಾನ ಎಂಬ ಆದರ್ಶಗಳನ್ನು ಒಟ್ಟು ವಷದಾದ್ಯಂತ ವಿಜ್ಞಾನ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚಾಗಿ ನಡೆಯಬೇಕು ಈ ಮೂಲಕ ಯುವ ವಿಜ್ಞಾನಿಗಳನ್ನು ತಯಾರು ಮಾಡುವ ಹೊಣೆಗಾರಿಕೆ ನಮ್ಮೆಲ್ಲರದು ಆಗಬೇಕು ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ಜ್ಞಾನ ವಿಜ್ಞಾನ ಸಮಿತಿಯ ಪ್ರೌಢಶಾಲಾ ವಿಭಾಗದ ಜಿಲ್ಲಾ ಸಂಯೋಜಕರಾಗಿ ನೇಮಕಗೊಂಡ ಡಿ.ಎನ್. ಮುಕುಂದ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಜಿ.ಶ್ರೀನಿವಾಸ್ ವಹಿಸಿದ್ದು, ಡಯೆಟ್‌ನ ತಾಂತ್ರಿಕ ಸಹಾಯಕ ನಾರಾಯಣಸ್ವಾಮಿ, ಸಮಿತಿಯ ಅಧ್ಯಕ್ಷ ಶರಣಪ್ಪ ಗಬ್ಬೂರ್, ಪ್ರಧಾನ ಕಾರ್ಯದರ್ಶಿ ಕೆ.ವಿ. ಜಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.