ಮೂಲದಲ್ಲೇ ಕಸ ವಿಂಗಡಣೆ ಮಾಡಲು ಪ್ರಾಮುಖ್ಯತೆ ನೀಡಿ


ಹುಬ್ಬಳ್ಳಿ,ಜು.29: ಘನತ್ಯಾಜ್ಯ ವಸ್ತು ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ಮೂಲದಲ್ಲೇ ಕಸ ವಿಂಗಡಣೆ ಮಾಡಲು ಅಧಿಕಾರಿಗಳು ಪ್ರಾಮುಖ್ಯತೆ ನೀಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಹೇಳಿದರು.
ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ ವಿಭಾಗ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಪಾಲಿಕೆಯ ಎಲ್ಲಾ ವಲಯಾಧಿಕಾರಿಗಳು ಒಂದು ತಿಂಗಳ ಅವಧಿಯೊಳಗೆ ಶೇಕಡಾ 100ರಷ್ಟು ಪ್ರಗತಿ ಸಾಧಿಸಬೇಕು. ನಿರಂತರ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲಾ ಶಾಲಾ ಕಾಲೇಜುಗಳ ಆವರಣದಲ್ಲಿ ಹಸಿ ಕಸದ ಸಂಸ್ಕರಣೆಗೆ ಕ್ರಮ ಜರುಗಿಸಲು ಸೂಚಿಸಿದರು.
ನಗರದ ಎಲ್ಲಾ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಬಳಕೆದಾರರ ಶುಲ್ಕವನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಮೈಸೂರು ಮಾದರಿಯಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಸಹ ಇಪಿಆರ್ ಸರ್ಟಿಫಿಕೇಟ್ (ಇxಣeಟಿಜeಜ Pಡಿoಜuಛಿeಡಿs ಖesಠಿoಟಿsibiಟiಣಥಿ (ಇPಖ) ಛಿeಡಿಣiಜಿiಛಿಚಿಣioಟಿ) ಗೆ ಕ್ರಮ ವಹಿಸಬೇಕಾಗಿದೆ. ವಾರ್ಡವಾರು ತ್ಯಾಜ್ಯ ಉತ್ಪಾದನೆಯ ಪ್ರಮಾಣವನ್ನು ಅಳಿದು, ಮುಂದಿನ ನಿರ್ವಹಣೆಗೆ ಯೋಜನೆ ರೂಪಿಸುವುದು ಅಗತ್ಯವಿದೆ. ಅನಧಿಕೃತವಾಗಿ ಯಾವುದೇ ತ್ಯಾಜ್ಯ ಇನ್ ಫಾರ್ಮಲ್ ಸೆಕ್ಟರ್ ಮೂಲಕ ವಿಲೇವಾರಿ ಆಗಬಾರದು. ಏಕೆಂದರೆ ಪೌರ ಘನತ್ಯಾಜ್ಯ ಪಾಲಿಕೆಯ ಸ್ವತ್ತು. ನಿಯಮಾನುಸಾರ ಇದರ ನಿರ್ವಹಣೆ ಪಾಲಿಕೆಯ ಜವಾಬ್ದಾರಿಯಾಗಿದೆ. ಪಾಲಿಕೆಯಿಂದ ನಿಯೋಜಿತ ಅಧಿಕೃತ ಸಂಸ್ಥೆಗಳಿಂದ ಮಾತ್ರ ನಿರ್ವಹಣೆಗೆ ಅವಕಾಶವಿರಬೇಕು ಎಂದು ತಿಳಿಸಿದರು.
ಕಟ್ಟಡ ತ್ಯಾಜ್ಯ ನಿರ್ವಹಣೆಗೆ ನಗರದಲ್ಲಿ ಸಂಗ್ರಹಣಾ ಸ್ಥಳಗಳನ್ನು ಗುರುತಿಸಿ, ಪ್ರಕಟಣೆ ಜಾರಿ ಮಾಡಿ, ಸಾರ್ವಜನಿಕರಿಗೆ ಕಟ್ಟಡ ತ್ಯಾಜ್ಯ ಸಾಗಾಣಿಕೆಗೆ ಅನುವು ಮಾಡಿಕೊಡಬೇಕು. ಮುಂಬರುವ ಗಣೇಶನ ಹಬ್ಬಕ್ಕೆ ವ್ಯಾಪಾರಸ್ಥರು ಪಿಒಪಿ ಮೂರ್ತಿಗಳನ್ನು ನಗರದಲ್ಲಿ ತಯಾರು ಮಾಡದಂತೆ, ಸಂಪೂರ್ಣವಾಗಿ ಈಗಲೇ ನಿಷೇಧಿಸಬೇಕು. ನಗರದಲ್ಲಿ ಅಥವಾ ಹೊರ ರಾಜ್ಯದ ಇತರೆ ನಗರಗಳಿಂದ ಪಿಒಪಿ ಮೂರ್ತಿಗಳನ್ನು ತಂದು ಪ್ರತಿಷ್ಠಾಪನೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಬೀದಿಬದಿ ವ್ಯಾಪಾರಿಗಳು ಗುರುತಿಸಿದ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಪಾಲಿಕೆಯು ಸ್ಥಳಗಳನ್ನು ಗುರುತಿಸಲು ಮುಂದಾಗಲಿ.ಅತಿಕ್ರಮಣ ತೆರವಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ರಸ್ತೆ ಅತಿಕ್ರಮಣ ಸಹ ಕಂಡು ಬಂದಿದ್ದು, ಪಾಲಿಕೆ ಇದಕ್ಕೆ ಕ್ರಮಜರುಗಿಸಬೇಕು. ಕೆಲಗೇರಿ ಕೆರೆಯೊಳಗೆ ಕೊಳಚೆ ನೀರು ಸೇರಿದಂತೆ ಅಗತ್ಯ ಯೋಜನೆ ರೂಪಿಸಿರಿ. ಉಣಕಲ್ ಕೆರೆಗೆ ಕೊಳಚೆ ನೀರು ಶೇಕರಣೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಪಾಲಿಕೆಯ ಅಧಿಕಾರಿಗಳು, ಇತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.