ಮೂರ್ತಿ ವಿರೂಪ: ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ವೀರಶೈವ ಸಮಾಜ ಪ್ರತಿಭಟನೆ

ಕಲಬುರಗಿ ನ 10- ರಾಜ್ಯದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬಿಜ್ಜಗೂಪಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರರ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೀರಶೈವ ಸಮಾಜ ಆಗ್ರಹಿಸಿದೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಎಸ್.ಪಾಟೀಲ ಕೊಡಲಹಂಗರಗಾ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿ, ಮೂರ್ತಿಯನ್ನು ಮರುಸ್ಥಾಪಿಸುವಂತೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಬುದ್ಧ, ಬಸವೇಶ್ವರ ಹಾಗೂ ಡಾ.ಅಂಬೇಡ್ಕರ ಸೇರಿದಂತೆ ಎಲ್ಲ ಮಹಾಪುರುಷರ ಪ್ರತಿಮೆಗಳಲ್ಲಿ ಕಡ್ಡಾಯ ಸಿಸಿ ಕ್ಯಾಮರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು, ವೀರಶೈವ ಲಿಂಗಾಯತ ಸಮಾಜದ ಭಾವನೆಯೊಂದಿಗೆ ಚಲ್ಲಾಟವಾಡಿರುವ ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿ ಕೊಳ್ಳಬೇಕು, ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ, ಅರುಣಕುಮಾರ ಪಾಟೀಲ, ಶ್ರೀಶೈಲ ಘೂಳಿ, ಕಲ್ಯಾಣಪ್ಪ ಪಾಟೀಲ ಮಳಖೇಡ, ಸಂಗಮೇಶ ನಾಗನಳ್ಳಿ, ಸುಭಾಷ ಬಿಜಾಪುರೆ, ಶರಣಗೌಡ ಸುಂಕದ, ಶಶಿಧರ ಮಾಕಾ, ಎಸ್.ವಿ.ಮಠಪತಿ, ಜಿ.ಡಿ.ಅಣಕಲ, ವಿಶ್ವನಾಥ ಪಾಟೀಲ ತಳ್ಳಳ್ಳಿ, ಮಂಜುನಾಥ ಹಾಗರಗಿ, ಜಗನ್ನಾಥ ಪಟ್ಟಣಶೆಟ್ಟಿ, ಶಿವಶರಣಪ್ಪ ಮುಖರಂಬಿ, ರಾಜಕುಮಾರ ಸಿಂಗಾ, ಸುರೇಶ ಪಾಟೀಲ ಜೋಗುರ, ಶಾಂತಕುಮಾರ ವಾಡೆದ, ಶರಣಗೌಡ ಎ.ಪಾಟೀಲ, ಅಮಿತ ಉದನೂರ, ಸಚಿನ ಸೂಂತ, ಸಂಗಮೇಶ ಮೂಲಗೆ, ಈಶ್ವರ ಮುನ್ನೂಳಿ, ಶರಣಪ್ಪ ಬುಳ್ಳಾ, ಹಣಮಂತರಾಯ ಪಾಟೀಲ, ಅಂಬಣ್ಣಾ ಅಂವಟಗಿ, ಗುರುರಾಜ ಎಸ್.ಕಾಗೆ, ಪ್ರಶಾಂತ ಗುಡ್ಡಾ, ಬಸವರಾಜ, ವೈಜನಾಥ ಪಾಟೀಲ ಸೇರಿದಂತೆ ವೀರಶೈವ ಲಿಂಗಾಯತ ಸಮಾಜಬಾಂಧವರು ಭಾಗವಹಿಸಿದ್ದರು.