ಮೂರ್ತಿ ಪ್ರತಿಷ್ಠಾಪನೆ: ಜಾತ್ರಾ ಮಹೋತ್ಸವ

ಹುಬ್ಬಳ್ಳಿ,ಮಾ23: ನಗರದ ಗೋಕುಲ್ ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದ ಶ್ರೀ ಆದಿಶಕ್ತಿ ದ್ಯಾಮವ್ವದೇವಿ, ಶ್ರೀ ಆದಿಶಕ್ತಿ ದುರ್ಗಾದೇವಿ ಮತ್ತು ಶ್ರೀ ಆದಿಶಕ್ತಿ ಮಲ್ಲೇಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾಮಹೋತ್ಸವ ಕಾರ್ಯಕ್ರಮವನ್ನು ಮಾರ್ಚ್ 27 ರಿಂದ 31 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮತಿ ಅಧ್ಯಕ್ಷ ಮಹಾದೇವಪ್ಪ ಪೂಜಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 27 ರಂದು ಶ್ರೀ ದೇವಿಗಳ ಉತ್ಸವ ಮೂರ್ತಿಗಳೊಂದಿಗೆ ಕುಂಭ, ವಾಧ್ಯ ಮೇಳಗಳೊಂದಿಗೆ ಪುರಪ್ರವೇಶ ಮಾಡಿ ಚೌಕಿಮನೆಯಲ್ಲಿ ಕೂಡಿಸಲಾಗುವುದು ಎಂದರು.
ಮಾ. 28 ರಂದು ದೇವಸ್ಥಾನದಲ್ಲಿ ಬೆಳಿಗ್ಗೆ ಹೋಮ, ಹವನ, ಪೂಜಾ ಕಾರ್ಯಕ್ರಮ ಸೇರಿದಂತೆ ಹಾಸ್ಯ ಪ್ರಧಾನ ನಾಟಕ ಪ್ರದರ್ಶನ ಜರುಗಲಿದ್ದು, 29 ರಂದು ಶ್ರೀ ದೇವಿಗಳಿಗೆ ಮುತ್ತೈದೆಯರಿಂದ ಕುಂಕಮಾರ್ಚನೆ, ಪರಸಾಪುರ ಮತ್ತು ಇಟಿಗಟ್ಟಿ ಗ್ರಾಮದವರಿಂದ ಉಡಿ ತುಂಬುವ ಪೂಜಾ ಸೇರಿದಂತೆ ವಿವಿಧ ಕಾರ್ಯಕ್ರಮ, ಮಾ.30 ರಂದು ಶ್ರೀದೇವಿಯರ ಉತ್ಸವಮೂರ್ತಿಗಳ ಮೆರವಣಿಗೆಯು ಗ್ರಾಮದಲ್ಲಿ ಸಂಚರಿಸಿ ಚೌಕಿಮನೆ ಸೇರಲಿದೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಮಾ. 31 ರಂದು ಚಂಡಿಹೋಮ ಹವನ ನವಗ್ರಹ ಪೂಜಾ ಕಾರ್ಯಕ್ರಮಗಳ ನಂತರ ಬೆ. 9 ಗಂಟೆಗೆ ಪೂಜ್ಯ ಸ್ವಾಮಿಗಳಿಂದ ದೇವತೆಗಳಿಗೆ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ.
ಬೆ. 11 ಗಂಟೆಗೆ ಧರ್ಮಸಭೆ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೆರವೇರಿಸುವರು.
ಮಾ 31 ರಂದು ಸಂಜೆ 7.30 ರಿಂದ 8.30 ರ ವರೆಗೆ ಪ್ರವಚನ ನಡೆಯಲಿದ್ದು, ರಾತ್ರಿ 9.30 ರಿಂದ ನಾಟಕ ಪ್ರದರ್ಶನವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯ್ಕರ್, ಶೇಖರಗೌಡ ಪಾಟೀಲ್, ಈಶ್ವರಪ್ಪ, ಹನುಮಂತಪ್ಪ ಬೂದಣ್ಣವರ, ನಿಂಗಪ್ಪ ಮ್ಯಾಗೇರಿ, ಬಾಳಪ್ಪ, ಮಡಿವಾಳಪ್ಪ ಸೇರಿದಂತೆ ಉಪಸ್ಥಿತರಿದ್ದರು.