ಮೂರೂ ಪಕ್ಷದಿಂದ ಭರ್ಜರಿ ಪ್ರಚಾರ | ಪ್ರತಿಹಳ್ಳಿಯಲ್ಲೂ ಮತಬೇಟೆ

ಗ್ರಾಮೀಣ ಅಖಾಡಕ್ಕಿಳಿದ ಆಕಾಂಕ್ಷಿಗಳು!
ದೇವದುರ್ಗ,ಏ.೦೬-ಇಷ್ಟುದಿನ ಪಟ್ಟಣ ಕೇಂದ್ರಿತವಾಗಿ ಓಡಾಡುತ್ತಿದ್ದ ಮೂರೂ ಪಕ್ಷದ ಆಕಾಂಕ್ಷಿಗಳು ಚುನಾವಣೆ ದಿನಾಂಕ ಘೋಷಣೆ ಆದ ನಂತರ ಗ್ರಾಮೀಣ ಭಾಗದ ಅಖಾಡಕ್ಕೆ ಇಳಿದಿದ್ದಾರೆ.
ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಪ್ರತಿಯೊಂದು ಹಳ್ಳಿಗೂ ತೆರಳಿ ಭರ್ಜರಿಯಾಗಿ ಮತಬೇಟೆ ಆಡುತ್ತಿದ್ದಾರೆ. ಜೆಡಿಎಸ್ ಮಾತ್ರ ಅಭ್ಯರ್ಥಿ ಘೋಷಣೆ ಮಾಡಿದ್ದು, ಬಿಜೆಪಿ, ಕಾಂಗ್ರೆಸ್ ತನ್ನ ಹುರಿಯಾಳು ಹೆಸರು ಹೇಳಿಲ್ಲ. ಆದರೂ ಮೂರೂ ಪಕ್ಷಗಳು ಜಿದ್ದಿಗೆ ಬಿದ್ದಿದ್ದು ನಿತ್ಯ ೮-೧೦ಹಳ್ಳಿಗಳಿಗೆ ಭೇಟಿನೀಡಿ ಪ್ರಚಾರ ಮಾಡುತ್ತಿದ್ದಾರೆ.
ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಬೆಂಬಲಿಗರೊಂದಿಗೆ ನಿತ್ಯ ೧೦ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿನೀಡಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಹತ್ತಾರು ಹಳ್ಳಿಗೆ ಭೇಟಿನೀಡಿ ಉಡಿತುಂಬವ ಕಾರ್ಯ ಸೇರಿ ವಿವಿಧ ರೀತಿಯಲ್ಲಿ ಪ್ರಚಾರ ಮಾಡಿ ಮಹಿಳಾ ಮತದಾರರನ್ನು ಸೆಳೆಯುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪರವಾಗಿ ಕೆಪಿಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಶ್ರೀದೇವಿ ನಾಯಕ ಕೂಡ ಬೆಂಬಲಿಗರ ಪಡೆಯೊಂದಿಗೆ ಗ್ರಾಮೀಣ ಭಾಗದಲ್ಲಿ ಸುತ್ತಾಡುತ್ತಿದ್ದಾರೆ.
ಮೂವರು ಆಕಾಂಕ್ಷಿಗಳಿಂದ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಹೊಸಹೊಸ ಭರವಸೆ ಕೂಡ ನೀಡುತ್ತಿದ್ದಾರೆ. ನಾಮಪತ್ರ ಸಲ್ಲಿಸುವದಿನ ಬಂದು ಬೆಂಬಲ ನೀಡುವ ಜತೆಗೆ ಶಕ್ತಿ ಪ್ರದರ್ಶನ ಮಾಡುವಂತೆ ಕೂಡ ಮನವಿ ಮಾಡುತ್ತಿದ್ದಾರೆ. ಹಳ್ಳಿಕಟ್ಟೆ, ಗ್ರಾಮದ ಪ್ರಮುಖ ಜಾಗ, ದೇವಸ್ಥಾನದಲ್ಲಿ ಸಭೆ ಸೇರಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕೈಗೊಂಡಿದ್ದು ಕಾಂಗ್ರೆಸ್ ಅಭ್ಯರ್ಥಿ ಗೊಂದಲದಿಂದ ಪ್ರಚಾರದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸುತ್ತಿದೆ.

೦೬-ಡಿವಿಡಿ-೪