ಮೂರು ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ

ದೇವದುರ್ಗ.ಏ.೧೮- ತಾಲೂಕಿನ ಕೃಷ್ಣಾನದಿದಂಡೆ ಗ್ರಾಮಗಳ ಮರಳು ಅಕ್ರಮ ಸಂಗ್ರಹ ಅಡ್ಡೆ ಮೇಲೆ ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಜಂಟಿಯಾಗಿ ದಾಳಿ ನಡೆಸಿ ಅಪಾರ ಪ್ರಮಾಣದ ಮರಳು ವಶಕ್ಕೆ ಪಡೆದಿದ್ದಾರೆ. ವಿವಿಧೆಡೆ ನಾಲ್ಕು ಇಟಾಚಿ, ೩ಟಿಪ್ಪರ್, ೨ಟ್ರ್ಯಾಕ್ಟರ್ ವಶಕ್ಕೆ ಪಡೆದು ಸುಮಾರು ೨೫ಲಕ್ಷ ರೂ. ಮೌಲ್ಯದ ೩ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ.
ಗೋಪಳಾಪುರದ ನದಿಯಲ್ಲಿ ಮರಳು ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದ ೨ಇಟಾಚಿ ವಶಕ್ಕೆ ಪಡೆಯಲಾಗಿದ್ದು ಸುಮಾರು ೬.೩೨ಲಕ್ಷ ರೂ. ಮೌಲ್ಯದ ೮೦೦ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ. ಇದೇ ಗ್ರಾಮದಲ್ಲಿ ನದಿಯಿಂದ ಮರಳು ಗುಡ್ಡಿಹಾಕುತ್ತಿದ್ದ ಇನ್ನೆರಡು ಜೆಸಿಬಿಗಳನ್ನು ವಶಕ್ಕೆ ಪಡೆಯಲಾಗಿದ್ದು ಚಾಲಕರು ಪರಾರಿಯಾಗಿದ್ದಾರೆ.
ನಗರಗುಂಡ ಗ್ರಾಸ್‌ನಲ್ಲಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದು ೧೫೦೦ರೂ. ಮೌಲ್ಯದ ೨ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ. ದೇವದುರ್ಗ-ಹೂವಿನಹೆಡಗಿ ಮುಖ್ಯರಸ್ತೆಯಲ್ಲಿ ಮರಳು ಸಾಗಿಸುತ್ತಿದ್ದ ೨ಟಿಪ್ಪರ್ ವಶಕ್ಕೆ ಪಡೆಯಲಾಗಿದ್ದು ೧ಲಕ್ಷ ರೂ. ಮೌಲ್ಯದ ೨೫ಮೆಟ್ರಿಕ್ ಟನ್ ಮರಳು ವಶಪಡಿಸಿಕೊಳ್ಳಲಾಗಿದೆ.
ಗೋಪಳಾಪುರದ ಸರ್ವೇ ನಂಬರ್ ೩೬/೨ರಲ್ಲಿ ಸಂಗ್ರಹಿಸಿದ್ದ ಸುಮಾರು ೧೬.೫೯ಲಕ್ಷ ರೂ. ಮೌಲ್ಯದ ೨೧೦೦ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆದು ಮಲ್ಲಿಕಾರ್ಜುನ ಶಾಂತಗೌಡ ವಿರುದ್ಧ ಕೇಸ್ ದಾಕಲಿಸಿಕೊಳ್ಳಲಾಗಿದೆ. ಸರ್ವೇ ನಂ.೨೧ರಲ್ಲಿ ಸಂಗ್ರಹಿಸಿದ್ದ ಮರಳು ಅಡ್ಡೆಮೇಲೆ ದಾಳಿ ನಡೆಸಿ ೫.೫೩ಲಕ್ಷ ರೂ. ಮೌಲ್ಯದ ೭೦೦ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆದು ಮುದಿರಂಗಯ್ಯ ಪರಮಯ್ಯ ನಾಯಕ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪಿಐ ಅಶೋಕ ಸದಲಗಿ ತಿಳಿಸಿದ್ದಾರೆ.
ದಾಳಿವೇಳೆ ಗಣಿಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಪೊಲೀಸರಾದ ಮರಸಣ್ಣ ಮಸರಕಲ್, ಶಿವಣ್ಣ, ಗೋಪಾಲಸಿಂಗ್, ಮಹೇಶ, ಹನುಮಂತ ಇದ್ದರು.