ಮೂರು ವರ್ಷಗಳಿಂದ ಮಲೇರಿಯಾ ಮುಕ್ತ ವಿಜಯನಗರ ಜಿಲ್ಲೆ


ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಏ.27: ಕಳೆದ ಮೂರು ವರ್ಷಗಳಿಂದ ವಿಜಯನಗರ ಜಿಲ್ಲೆ ಮಲೇರಿಯಾ ಮುಕ್ತವಾಗಿದೆ. ಮುಂದೆಯೂ ಶೂನ್ಯ ಮಲೇರಿಯಾ ಗುರಿಯೊಂದಿಗೆ 2025ರ ವೇಳೆಗೆ ಮಲೇರಿಯಾ ಮುಕ್ತ ದೇಶದ ಗುರಿಯಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್ ನಾಯ್ಕ ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹೊಸಪೇಟೆಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಒಂದೂ ಮಲೇರಿಯಾ ಪ್ರಕರಣ ಕಂಡು ಬಂದಿಲ್ಲ. ಜನಜಾಗೃತಿಯ ಜೊತೆಗೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕಾರ್ಯವೈಖರಿಯಲ್ಲಿ ಮತ್ತಷ್ಟು ಸುಧಾರಣೆ ತಂದುಕೊಂಡು, 2025ರ ವೇಳೆಗೆ ಮಲೇರಿಯಾ ಮುಕ್ತ ಗುರಿ ತಲುಪಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು ಮತ್ತು ಮಲೇರಿಯಾ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆರ್‍ಸಿಎಚ್‍ಒ ಅಧಿಕಾರಿ ಡಾ.ಜಂಬಯ್ಯ ನಾಯಕ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ, ತಾಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಡಾ.ಷಣ್ಮುಖ ನಾಯ್ಕ, ಜಿಲ್ಲಾ ವೈದ್ಯಕೀಯ ಶಿಕ್ಷಣಾಧಿಕಾರಿ ಡಾ.ಎಂ.ಪಿ.ದೊಡ್ಡಮನಿ, ಡಾ.ಜಗದೀಶ ಪಾಟ್ನೆ, ಡಾ.ಧರ್ಮನಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.