ಮೂರು ಬಾರಿ ಶಾಸಕ, ಸಚಿವನಾಗಿ ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಿದ್ದೇನೆ: ನಾರಾಯಣಗೌಡ

ಕೆ.ಆರ್.ಪೇಟೆ. ಮಾ.09:- ಮೂರು ಬಾರಿ ಶಾಸಕನಾಗಿ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಿದ್ದೇನೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಹಾಗೂ ನಿಮ್ಮೆಲ್ಲರ ಸೇವೆಯನ್ನು ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಡುವಂತೆ ಸಚಿವ ನಾರಾಯಣಗೌಡ ಜನರಲ್ಲಿ ಮನವಿ ಮಾಡಿದರು.
ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿ ಗವಿಮಠದ ಕಾಪನಹಳ್ಳಿ ಸಮೀಪವಿರುವ ಮಡಿಲಮ್ಮನವರ ದೇವಾಲಯದ ಆವರಣದಲ್ಲಿ ಸಚಿವ ನಾರಾಯಣಗೌಡ ಅಭಿಮಾನಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಔತಣಕೂಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ನನ್ನ ಅಣ್ಣ ತಮ್ಮಂದಿರ ಯಾರೂ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿಲ್ಲ. ಮತದಾರ ಪ್ರಭುಗಳಾದ ನೀವೇ ನನ್ನ ತಂದೆ ತಾಯಿ. ಮತದಾರ ದೇವತೆಗಳಾದ ನೀವು ನಾನು ಮುಂದೆ ಏನು ಮಾಡಬೇಕೆಂಬುದನ್ನು ಹೇಳಬೇಕು. ನಾನೆಂದೂ ಕ್ಷೇತ್ರದ ಜನರಿಗೆ ಮೋಸ ಮಾಡಿಲ್ಲ. ಚುನಾವಣಾ ರಾಜಕೀಯ ಬರುತ್ತದೆ ಹೋಗುತ್ತದೆ. ಆದರೆ ನಾನು ಸದಾ ನಿಮ್ಮ ಸೇವೆಯಲ್ಲಿರುತ್ತೇನೆ. ನಾನು ಸಂಪಾದನೆಗಾಗಿ ಹೊರಗೆ ಹೋಗಿರಬಹುದು. ಆದರೆ ಇಲ್ಲಿನ ಮಣ್ಣಿನಲ್ಲಿಯೇ ನಾನು ಮಣ್ಣಾಗುತ್ತೇನೆಂದ ನಾರಾಯಣಗೌಡ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.
ಕ್ಷೇತ್ರದಲ್ಲಿ ಎಸ್.ಎಂ.ಲಿಂಗಪ್ಪ, ಎಂ.ಪುಟ್ಟಸ್ವಾಮೀಗೌಡ, ಮಾಜಿ ಸ್ಪೀಕರ್ ಕೃಷ್ಣ ಅವರಂತಹ ಸಜ್ಜನ ರಾಜಕಾರಣಿಗಳು ಬಂದು ಹೋಗಿದ್ದಾರೆ. ಅವರನ್ನು ನಾನು ಗೌರವದಿಂದ ಸ್ಮರಿಸುತ್ತೇನೆ. ಆದರೆ ಪುಡಾರಿ ರಾಜಕಾರಣಿಗಳನ್ನು ನೆನೆಯುವ ಅಗತ್ಯ ನನಗಿಲ್ಲ. ಎಲ್ಲೊ ಕುಳಿತು ನನ್ನ ಬಗ್ಗೆ ಮಾತನಾಡುವವರು ನನ್ನ ಎದುರಿಗೆ ಬರಲಿ ಎಂದು ಗುಡಿಗಿದ ನಾರಾಯಣಗೌಡ ಪುಡಾರಿ ರಾಜಕಾರಣಕ್ಕೆ ನಾನು ಉತ್ತರ ಕೊಡುವ ಅಗತ್ಯವಿಲ್ಲ. ಅವರಂತೆ ನಾನು ಕೊಚ್ಚೆ ಗುಂಡಿಗೆ ಇಳಿಯುವ ಅಗತ್ಯವಿಲ್ಲ. ಇಳಿದರೆ ಕೊಚ್ಚೆ ನನಗೆ ಮೆತ್ತಿಕೊಳ್ಳುತ್ತದೆಂದರು. ನಾನೆಂದೂ ಮೋಸದ ರಾಜಕಾರಣ ಮಾಡಿಲ್ಲ. ಮುಂಬೈನಲ್ಲಿ ಒಂದು ದಿನಕ್ಕೆ ಎರಡು ರೂಪಾಯಿಯಲ್ಲಿ ಜೀವನ ಮಾಡಿದ್ದೇನೆ. ಫುಟ್ ಪಾಥ್ ನಲ್ಲಿ ಮಲಗಿದ್ದೇನೆ. ಆದರೆ ಯಾರ ಕತ್ತನ್ನೂ ಕತ್ತರಿಸಿಲ್ಲ. ಯಾರ ಮನೆಯನ್ನೂ ಹಾಳು ಮಾಡಿಲ್ಲ. ಪುಡಾರಿಗಳ ಆಟವನ್ನು ಎಲ್ಲಿಯೂ ನಡೆಯಲು ಬಿಡುವುದಿಲ್ಲ. ನಾನ್ಯಾರು ಎನ್ನುವುದನ್ನು ಅರ್ಥಮಾಡಿಸುತ್ತೇನೆ. ಕ್ಷೇತ್ರದಲ್ಲಿನ ಕೆರೆ ಕಟೆಗಳನ್ನು ಹೇಮೆಯ ನೀರಿನಿಂದ ತುಂಬಿಸುವ ಕೆಲಸ ಆಗುತ್ತಿದೆ. ರಸ್ತೆಗಳು ಸರಿಯಿಲ್ಲ ಎನ್ನುವುದು ನನಗೆ ಗೊತ್ತಿದೆ. ನೀವು ಆರ್ಶೀವಾದ ಮಾಡಿದರೆ ಮುಂದಿನ ಆರು ತಿಂಗಳಿನಲ್ಲಿ ತಾಲೂಕಿನ ಎಲ್ಲಾ ರಸ್ತೆಗಳನ್ನೂ ಅಭಿವೃದ್ದಿಪಡಿಸುತ್ತೇನೆಂದರು. ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ತಾಲ್ಲೂಕನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ ಎಂದ ಕೆ.ಸಿ.ಎನ್ .ರಾಜಕೀಯ ಇರಲಿ ಇಲ್ಲದಿರಲಿ ಶರೀರದಲ್ಲಿ ಉಸಿರಿರುವ ತನಕ ನಿಮ್ಮ ಸೇವೆ ಮಾಡಲು ಸದಾ ಸಿದ್ದನಿದ್ದೇನೆ ಎಂದು ತಿಳಿಸಿದರು.
ಭರ್ಜರಿ ಬಾಡೂಟ:-ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲೂ ಭರ್ಜರಿ ಬಾಡೂಟದ ರಾಜಕಾರಣ ಆರಂಭಿಸಿದ್ದಾರೆ. ಈಗಾಗಲೇ ಸಂತೇಬಾಚಹಳ್ಳಿ ಹೋಬಳಿಯ ಗವಿರಂಗನಾಥ ದೇವಾಲಯದ ಆವರಣ ಮತ್ತು ಹೋಬಳಿ ಕೇಂದ್ರ ಶೀಳನೆರೆಯಲ್ಲಿ ಬಾಡೂಟದ ಸಮಾವೇಶಗಳನ್ನು ಯಶಸ್ವಿಯಾಗಿ ಸಂಘಟಿಸಿರುವ ಸಚಿವ ಕೆ.ಸಿ.ನಾರಾಯಣಗೌಡ ಇಂದು ಕಾಪನಹಳ್ಳಿಯ ಮಡಿಲಮ್ಮನವರ ದೇವಾಲಯದ ಆವರಣದಲ್ಲಿ ಮೂರನೆ ಸುತ್ತಿನ ಬಾಡೂಟವನ್ನು ಯಶಸ್ವಿಯಾಗಿ ನಡೆಸಿದರು. ಸಚಿವ ಕೆ.ಸಿ.ಎನ್ ಬಿಜೆಪಿ ಪಕ್ಷದಲ್ಲಿದ್ದರೂ ಮತಭೇಟೆಯ ಕಾರ್ಯಕ್ರಮಗಳನ್ನು ಬಿಜೆಪಿ ಬ್ಯಾನರ್ ಅಡಿಯಲ್ಲಿ ರೂಪಿಸದೆ ತಮ್ಮ ಅಭಿಮಾನಿ ಬಳಗದ ಹೆಸರಿನಲ್ಲಿ ಸಂಘಟಿಸುವ ಮೂಲಕ ಮುಂದೆ ತಾವು ಯಾವುದೇ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಂಡರೂ ತಮ್ಮ ಬೆಂಬಲಿಗ ಮತದಾರ ಪಡೆ ಚದುರದಂತೆ ನೋಡಿಕೊಳ್ಳುವ ಕೆಲಸವನ್ನು ಬಾಡೂಟದ ಸಮಾವೇಶಗಳ ಮೂಲಕ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಕೆ ಶ್ರೀನಿವಾಸ್,ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಜವರಾಯಿಗೌಡ,ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಕೈಗೋನಹಳ್ಳಿ ಕುಮಾರ್, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಗ್ರಾ.ಪಂ.ಅಧ್ಯಕ್ಷ ಅಂಜನಿಗೌಡ, ತಾಲೂಕ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಗೂಡೆಹೊಸಹಳ್ಳಿ ಜವರೇಗೌಡ, ಮುಖಂಡರಾದ ಪ್ರವೀಣ್, ಮೋದೂರು ಮಂಜುನಾಥ್, ದೊದ್ದನಕಟ್ಟೆ ನಾರಾಯಣ, ಪ್ರಥಮ ದರ್ಜೆ ಗುತ್ತಿಗೆದಾರ ಪಾಂಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.