ಮೂರು ಬಾರಿ ಪರೀಕ್ಷೆ ಅವೈಜ್ಞಾನಿಕ: ನಮೋಶಿ ಟೀಕೆ

ಕಲಬುರಗಿ: ಸೆ.08 : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಈಗ ಆದೇಶ ಹೊರಡಿಸಿ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ 3 ಬಾರಿ ಪರೀಕ್ಷೆಗೆ ನಿರ್ಣಯ ತೆಗೆದುಕೊಂಡು ಆದೇಶ ಹೊರಡಿಸಿರುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದೆ ಎಂದು ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರದ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಟೀಕಿಸಿದ್ದಾರೆ.
ಇದನ್ನು ನೋಡಿದರೆ ಇಲಾಖೆಗೆ ಇನ್ನು ಮುಂದೆ ಹೆಸರು ಬದಲಾಯಿಸಿ ಕೇವಲ ಪರೀಕ್ಷಾ ನಡೆಸುವ ಮಂಡಳಿ ಎಂದು ಹೆಸರಿಡುವುದೇ ಸೂಕ್ತವಾಗಿದೆ. ರಾಜ್ಯ 3 ಪರೀಕ್ಷೆ ನಡೆಸುವುದರಿಂದ ಶಿಕ್ಷಕರಿಗೆ ಪರೀಕ್ಷಾ ಹೊರೆ ಆಗಿ ಕಲಿಕೆಗೆ ಬರೆ ಬೀಳುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳಿಗೆ 3 ವಾರ್ಷಿಕ ಪರೀಕ್ಷೆಗಳನ್ನು ನಡೆಸುವದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯ ಆಸಕ್ತಿಯು ಕಡಿಮೆಯಾಗಲಿದೆ. ಇದನ್ನು ಅವರು ಉಡಾಫೆಯಾಗಿ ಪರಿಗಣಿಸುವ ಸಾಧ್ಯತೆ ಇರುವುದರಿಂದ ಕನಿಷ್ಠ 6 ತಿಂಗಳಿಗೆ ಕಾಲ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಶಿಕ್ಷಕರು ಸುಮಾರು 6 ತಿಂಗಳು ಅಂದರೆ ಮಾರ್ಚ್‍ನಿಂದ ಅಗಸ್ಟವರೆಗೆ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಇದರಿಂದ ಶಿಕ್ಷಕರ ಬೋಧನಾ ಅವಧಿಯ ಕಡಿಮೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆಯ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮುಂಚೆ ಯೋಜನೆಯಿಂದಾಗಬಹುದಾದ ಸಾಧಕ ಬಾಧಕಗಳನ್ನು ಶಿಕ್ಷಣ ತಜ್ಞರು, ಶಿಕ್ಷಕ ಸಂಘಟನೆಗಳು, ಶಿಕ್ಷಕರ, ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಜೊತೆ ಖಾಸಗಿ ಆಡಳಿತ ಮಂಡಳಿಗಳೊಂದಿಗೆ ಸಮಾಲೋಚನೆ ನಡೆಸಬೇಕಾಗಿತ್ತು, ಎಲ್ಲಿಯೂ ಚರ್ಚಿಸಿದೆ ಸರ್ಕಾರ ಏಕಪಕ್ಷಿಯ ನಿರ್ಧಾರ ಕೈಗೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚಾಗಲಿದೆ. ಆದ್ದರಿಂದ ಈ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಸರ್ಕಾರಕ್ಕೆ ನಮೋಶಿ ಅವರು ಒತ್ತಾಯಿಸಿದ್ದಾರೆ.