ಮೂರು ಪಕ್ಷದ ಅಭ್ಯರ್ಥಿಗಳ ನಿದ್ದೆಗೆಡಿಸಿದ ಕೆಎಸ್‌ಕೆ

ಹುಳಿಯಾರು, ಮಾ. ೨೭- ಇಲ್ಲಿನ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್‌ಕುಮಾರ್ ಅವರ ಬಂಡಾಯದ ಬಾವುಟ ಕೇವಲ ಬಿಜೆಪಿ ಅಭ್ಯರ್ಥಿಗಳಿಗಷ್ಟೆಯಲ್ಲ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಗೂ ನಿದ್ದೆಗೆಡಿಸಿದೆ.
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಬಿಜೆಪಿ ಪಕ್ಷದಿಂದ ತಮ್ಮ ಬೆಂಬಲಿಗರಿಗೆ ಬಿ ಫಾರಂ ಕೊಡಿಸಲು ಕೆ.ಎಸ್.ಕಿರಣ್‌ಕುಮಾರ್ ಹೈಕಮಾಂಡ್ ಬಳಿ ಪಟ್ಟು ಹಿಡಿದರಾದರೂ ಕೊನೆ ಕ್ಷಣದಲ್ಲಿ ವಿಫಲರಾದರು. ಸುಮಾರು ೨೫ ವರ್ಷಗಳಿಗಿಂತೂ ಹೆಚ್ಚು ವರ್ಷಗಳಿಂದ ಬಿಜೆಪಿ ಕಟ್ಟಿ ಬೆಳೆಸಿದ ತಮಗೆ ಆದ ಅನ್ಯಾಯದ ವಿರುದ್ಧ ಸಿಡಿದೆದ್ದು ಬಂಡಾಯದ ಬಾವುಟ ಹಾರಿಸಿದ್ದಾರೆ.
ಏಳೆಂಟು ವಾರ್ಡ್‌ಗಳಲ್ಲಿ ತಮ್ಮ ಬೆಂಬಲಿಗರನ್ನು ನಿಲ್ಲಿಸಿ ಹಗಲು ರಾತ್ರಿಯೆನ್ನದೆ ಬಿಸಿಲ ಝಳ ಲೆಕ್ಕಿಸದೆ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಪಟ್ಟಣಕ್ಕೆ ನೀಡಿದ ಕೊಡುಗೆಯನ್ನು ಹೇಳಿಕೊಂಡು ಮತದಾರರನ್ನು ಸೆಳೆಯುತ್ತಿದ್ದಾರೆ. ಕೆ.ಎಸ್.ಕಿರಣ್‌ಕುಮಾರ್ ಜತೆ ಅವರ ಬೆಂಬಲಿಗರ ಪಡೆಯೇ ನಿಂತಿದ್ದು ಅಭ್ಯರ್ಥಿಗಳನ್ನು ಗೆಲ್ಲಿಸಲು ಅವಿರತ ಹೋರಾಟ ಮಾಡುತ್ತಿದ್ದಾರೆ.
ಕೆ.ಎಸ್.ಕಿರಣ್‌ಕುಮಾರ್ ಬಿಜೆಪಿಯವರಾಗಿರುವುದರಿಂದ ಅವರ ಬಂಡಾಯ ಬಿಜೆಪಿಗೆ ತಟ್ಟುತ್ತದೆಂದು ಲೆಕ್ಕ ಹಾಕಲಾಗಿತ್ತು. ಆದರೆ ಪಕ್ಷೇತರರಾಗಿ ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ಮುಸ್ಲಿಂ ಮತಗಳ ಬುಟ್ಟಿಗೂ ಅವರು ಕೈ ಹಾಕಿದ್ದಾರೆ. ಅಲ್ಲದೆ ಹಿಂದುಳಿದವರು, ದಲಿತರ ಮತಗಳನ್ನು ಸೆಳೆಯುವಲ್ಲಿ ಸಫಲರಾಗುತ್ತಿದ್ದಾರೆ. ಇದರಿಂದ ಸಾಂಪ್ರದಾಯಕ ಮತಗಳನ್ನು ಕಳೆದುಕೊಳ್ಳವ ಭೀತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳ ಗೆಲುವು ಕಷ್ಟಸಾಧ್ಯ ಎನ್ನುತ್ತಿದ್ದವರು ಈಗ ಕೆಎಸ್‌ಕೆ ಬಣದ ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ. ಗೆಲುವಿನ ರೇಸ್‌ಗೆ ಪಕ್ಷೇತರರು ಬಂದಿರುವುದನ್ನು ಕಂಡ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ನಡುಕ ಆರಂಭವಾಗಿದೆ. ಕೆಎಸ್‌ಕೆ ಒಳ ಏಟಿಗೆ ಯಾರು ಬಲಿಯಾಗುತ್ತಾರೋ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಶುರುವಾಗಿದೆ. ಈ ಬಂಡಾಯ ಯಾರ ಬುಡ ಅಲುಗಾಡಿಸುತ್ತದೆಯೋ ಎನ್ನುವುದನ್ನು ಫಲಿತಾಂಶ ತಿಳಿಸಲಿದೆ.