ಮೂರು ಪಕ್ಷಗಳಿಂದ ಬಿಲ್ಲವರಿಗೆ ಕನಿಷ್ಠ ೧೦ ಸೀಟು ನೀಡಲಿ

ರಾಯಚೂರು,ಏ.೬- ೨೦೨೩ ವಿಧಾನಸಭಾ ಚುನಾವಣೆಯಲ್ಲಿ ಬಿಲ್ಲವ,ಈಡಿಗ, ನಾಮಧಾರಿ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಕನಿಷ್ಠ ತಲಾ ೧೦ ಸೀಟ್ ಕೊಡಲೇಬೇಕು ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನಮ್ಮ ಸಮುದಾಯಕ್ಕೆ ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯ ಮಾಡಿದರೆ ಮೂರು ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು,ಕಾಂಗ್ರೆಸ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ೧೨೪ ಅಭ್ಯರ್ಥಿಗಳ ಪೈಕಿ ಬಿಲ್ಲವ ಸಮುದಾಯಕ್ಕೆ ಕೇವಲ ೬ ಸೀಟ್ ನೀಡಿ ಬಿಲ್ಲವ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದರು.
ಗಂಗಾವತಿ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡದೇ ನಮ್ಮ ಸಮುದಾಯದ ಶ್ರೀನಾಥ ದಣಿ ಗೆ ಕಾಂಗ್ರೆಸ್ ಟಿಕೇಟ್ ನೀಡಬೇಕು ಇಲ್ಲವಾದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸುತ್ತವೆ ಎಂದು ಎಚ್ಚರಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ
ಈಡಿಗ ಸಮುದಾಯವು ಕಲಬುರ್ಗಿ ಸೇಡಂನಲ್ಲಿ ೨೨ ಸಾವಿರ ಜನರಿದ್ದಾರೆ.ಚಿತ್ತಾಪುರ ೨೦, ಚಿಂಚೊಳ್ಳಿ ೧೪ ಸಾವಿರ ಯಾದಗಿರಿ ಕ್ಷೇತ್ರದಲ್ಲಿ ೨೩ ಸಾವಿರ ಮತದಾರರು ಇದ್ದಾರೆ ಎಂದ ಅವರು,೯ ರಿಂದ ೧೦ ಕ್ಷೇತ್ರಗಳಲ್ಲಿ ಸುಮಾರು ೨೦ರಿಂದ ೨೫ ಸಾವಿರ ಮತದಾರರು ನಮ್ಮ ಸಮಾಜದವರು ಇದ್ದಾರೆ ಈ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಕನಿಷ್ಠ ತಲಾ ೧೦ ಸೀಟ್ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ,ಮಹೇಶ್ ಗೌಡ,ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.