
ನವದೆಹಲಿ, ಮೇ.೧೯- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಮೂರು ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ತಮ್ಮ ಪ್ರವಾಸದ ಮೊದಲ ಚರಣದಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಆಹ್ವಾನದ ಮೇರೆಗೆ ಹಿರೋಷಿಮಾಕ್ಕೆ ಭೇಟಿ ನೀಡಲಿದ್ದು, ಅಲ್ಲಿ ನಡೆಯಲಿರುವ ಜಿ-೭ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಶಾಂತಿ, ಸುಸ್ಥಿರತೆ, ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆಯ ಕುರಿತು ಪ್ರಧಾನಮಂತ್ರಿ, ತಮ್ಮ ಭಾಷಣದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ.ಇದೇ ವೇಳೆ ಜಿ-೭ ಸದಸ್ಯ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಸಹ ನಡೆಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ಪ್ರಸ್ತುತ ಜಿ-೭ ಶೃಂಗಸಭೆ ಅಧ್ಯಕ್ಷತೆಯ ಅವಧಿಯಲ್ಲಿ ಹಲವು ಪ್ರಮುಖ ಆದ್ಯತೆಗಳ ಕುರಿತು ಚರ್ಚೆಗಳು ನಡೆಯಲಿವೆ. ಪರಮಾಣು ನಿಶಸ್ತ್ರೀಕರಣ, ಆರ್ಥಿಕ ಸ್ವಾವಲಂಬನೆ, ಭದ್ರತೆ, ಪಾದೇಶಿಕ ವಿಚಾರಗಳು, ಹವಾಮಾನ ಮತ್ತು ಇಂಧನ, ಆಹಾರ ಮತ್ತು ಆರೋಗ್ಯ ಹಾಗೂ ಅಭಿವೃದ್ಧಿ ಕುರಿತ ವಿಚಾರಗಳು ಚರ್ಚೆಗೆ ಬರಲಿವೆ ಎಂದು ಹೇಳಿದರು.
ಇದಾದ ನಂತರ ಪ್ರಧಾನಿ ತಮ್ಮ ಪ್ರವಾಸದ ದ್ವಿತೀಯ ಚರಣದಲ್ಲಿ ಮೇ೨೧ ರಂದು ಸಂಜೆ ಪಪುವ ನ್ಯುಗಿನಿಯ ರಾಷ್ಟ್ರದ ಪೋರ್ಟ್ ಮೊರ್ಸ್ಬೈಗೆ ತಲುಪಲಿದ್ದಾರೆ. ಮಾರನೇ ದಿನ ಇಂಡೋ-ಪೆಸಿಫಿಕ್ ದ್ವೀಪ ಸಹಕಾರ ಸಭೆ ಉದ್ಘಾಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಈ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವುದಕ್ಕೆ ವಿಶೇಷ ಮಹತ್ವ ಬಂದಿದೆ. ಅದೇ ದಿನ ಅಂದರೆ ಮೇ ೨೨ ರಂದು ನರೇಂದ್ರ ಮೋದಿ ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಲಿದ್ದು, ಆ ದೇಶದ ಸಹವರ್ತಿ ಆಂಟನಿ ಅಲ್ಬಾನಿಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಅವರು ವಿವರಿಸಿದರು.