ಮೂರು ದಿನ ಲಾಕ್ ಡೌನ್ – ಒಂದು ದಿನ ಬಿಡುವು ಅವೈಜ್ಞಾನಿಕ ನಿರ್ಧಾರ

ನಗರದ ೩೫ ವಾರ್ಡ್ ಮನೆ ಮನೆಗೆ ತರಕಾರಿ ಮುಟ್ಟಿಸಲು ಕಾಂಗ್ರೆಸ್ ಸಿದ್ಧ
ರಾಯಚೂರು.ಮೇ.೨೦- ಮೂರು ದಿನ ಲಾಕ್ ಡೌನ್ ಒಂದು ದಿನ ದಿನಸು ಖರೀದಿ ಅವಕಾಶ ಏಕಪಕ್ಷೀಯ ನಿರ್ಧಾರದಿಂದ ನಿನ್ನೆ ನಗರದಲ್ಲಿ ಜನ ಸಾಗರ ಕೊರೊನಾ ತಡೆಗಿಂತ ಮತ್ತೇ ಕೊರೊನಾ ಹರಡುವಿಕೆಗೆ ಎಡೆ ಮಾಡಿದಂತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ತಮ್ಮ ನಿರ್ಧಾರ ಪುನರ್ ಪರಿಶೀಲಿಸಿ, ಎಲ್ಲಾ ಆಡಳಿತ ಮತ್ತು ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ, ಲಾಕ್ ಡೌನ್‌ನಂತಹ ಮಹತ್ವದ ನಿರ್ಧಾರ ಕೈಗೊಳ್ಳಬೇಕೆಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಹೇಳಿದರು.
ಕೊರೊನಾ ನಿಯಂತ್ರಣಕ್ಕಾಗಿ ಮಾಡಿದ ಈ ಲಾಕ್ ಡೌನ್ ನಿನ್ನೆ ಒಂದೇ ದಿನ ಭಾರೀ ಪ್ರಮಾಣದಲ್ಲಿ ಕೊರೊನಾ ಹರಡಲು ಕಾರಣವಾಗಿತ್ತು. ನಗರದ ಎಲ್ಲಾ ರಸ್ತೆಗಳಲ್ಲಿ ಜನ ಸಂದಣಿ ತೀವ್ರವಾಗಲು ಯಾರು ಕಾರಣ?. ಮೂರು ದಿನ ಲಾಕ್ ಡೌನ್ ನಂತರ ಒಂದು ದಿನ ಓಡಾಟಕ್ಕೆ ಅವಕಾಶ ನೀಡಿದರೇ, ಇದರಿಂದಾಗುವ ಪರಿಣಾಮ ಯಾವ ರೀತಿಯಲ್ಲಿರುತ್ತದೆಂದು ಜಿಲ್ಲಾಡಳಿತ ಗಮನಿಸಬೇಕು. ಇದರ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಬೇಕು. ಜಿಲ್ಲಾಡಳಿತದ ಈ ನಿರ್ಧಾರದಿಂದ ನಿನ್ನೆ ೧೦ ರೂ.ಗೆ ಮಾರುವ ಟೊಮಾಟೊ ೬೦ ಕೆಜಿ ಮಾರಾಟವಾಗಿದೆ. ಎಲ್ಲಾ ತರಕಾರಿ ದುಬಾರಿಯಾಗಿ ಜನ ಕಂಗಾಲಾಗುವಂತಾಯಿತು. ಅನೇಕರು ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಸಾಧ್ಯವಾಗದ ಪರಿಸ್ಥಿತಿಗೆ ಜಿಲ್ಲಾಡಳಿತ ನೇರ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ಸಂಯೋಗದೊಂದಿಗೆ ಕಾಂಗ್ರೆಸ್ ಪಕ್ಷ ೩೫ ವಾರ್ಡ್‌ಗಳಲ್ಲಿ ಮನೆ ಮನೆಗೆ ತರಕಾರಿ ಖರೀದಿಸುವ ವ್ಯವಸ್ಥೆ ಮಾಡಲು ಸಿದ್ಧವಾಗಿದೆ. ತಳ್ಳು ಬಂಡಿ ಮೂಲಕ ಜನರ ಮನೆ ಬಾಗಿಲಿಗೆ ತರಕಾರಿ ಮುಟ್ಟುವಂತೆ ಮತ್ತು ಜನರು ಸಾಮಾಜಿಕ ಅಂತರದ ಮೂಲಕ ಅಂದಿನ ತರಕಾರಿ ಖರೀದಿಗೆ ಅವಕಾಶವಾಗುವಂತೆ ವ್ಯವಸ್ಥೆ ಮಾಡಲು ಸಿದ್ಧರಿದ್ದು, ಜಿಲ್ಲಾಧಿಕಾರಿ ಅನುಮತಿಸಿದರೇ, ಇದನ್ನು ಅನುಷ್ಠಾನಕ್ಕೆ ತರಲು ನಾವು ಬದ್ಧ. ಜನರಿಗೆ ಅಗತ್ಯ ವಸ್ತುಗಳು ಪಡೆಯಲು ಸೌಕರ್ಯ ನೀಡುವುದರೊಂದಿಗೆ ಎಲ್ಲಾ ಒಂದೇ ಕಡೆ ಸೇರುವುದನ್ನು ತಡೆಯುವ ಪರ್ಯಾಯ ವ್ಯವಸ್ಥೆ ಜಿಲ್ಲಾಡಳಿತ ಮಾಡಬೇಕು. ಇಲ್ಲದಿದ್ದರೇ, ನಿನ್ನೆ ಯಾವ ರೀತಿ ಜನ ಸಂದಣಿ ನಗರದಲ್ಲಿ ಸೇರಿತ್ತೋ ಅದೇ ಪರಿಸ್ಥಿತಿ ನಿರ್ಮಾಣವಾಗಲಿವೆ.
ಲಾಕ್ ಡೌನ್ ಮಾಡುವ ಉದ್ದೇಶ ಕೊರೊನಾ ನಿಯಂತ್ರಿಸುವುದಾಗಿದೆ. ಆದರೆ, ನಿನ್ನೆಯ ಲಾಕ್ ಡೌನ್ ರಿಯಾಯಿತಿ ಸಾವಿರಾರು ಜನಕ್ಕೆ ಕೊರೊನಾ ಹರಡುವ ಆಪತ್ತಿಗೆ ಕಾರಣವಾಯಿತು. ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುವ ಪೂರ್ವ ಪ್ರಾಯೋಗಿಕವಾಗಿ ಇದು ಎಷ್ಟು ಸೂಕ್ತ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು. ಈ ಬಗ್ಗೆ ಪಕ್ಷ ಮತ್ತು ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚಿಸಿ, ಕ್ರಮ ಕೈಗೊಳ್ಳುವುದರಿಂದ ಕೊರೊನಾ ಹರಡುವುದನ್ನು ನಿಯಂತ್ರಿಸಲು ಸಾಧ್ಯವೇ?. ನಿನ್ನೆಯ ಘಟನೆಯಿಂದ ನಗರದಲ್ಲಿ ಎಷ್ಟು ಜನರಿಗೆ ಕೊರೊನಾ ಹರಡುವಂತಾಗಿದೆಯೋ ಎನ್ನುವುದು ಆ ದೇವರಿಗೆ ಗೊತ್ತು ಎಂದು ಅವರು ಹೇಳಿದರು.